ತುಮಕೂರು : ಪರಸ್ಪರ ಪ್ರೀತಿಸಿ ಮನೆಯವರನ್ನೂ ಒಪ್ಪಿಸಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಜೋಡಿಯೊಂದು ಧಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಕರ ಅಪಘಾತದಲ್ಲಿ ಮೃತಪಟ್ಟರೆ, ಮದುವೆಯಾಗಬೇಕಿದ್ದ ಯುವತಿ ಆತನ ಸಾವನ್ನು ಜೀರ್ಣಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತುಮಕೂರು ತಾಲೂಕು ಅರೆಹಳ್ಳಿ ಗ್ರಾಮದ ಸುಷ್ಮಾ(22) ಮತ್ತು ಮಸ್ಕಲ್ ಗ್ರಾಮದ ಧನುಷ್ (23) ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ನಡೆಸುತ್ತಿದ್ದ ಧನುಷ್, ಯುವತಿಯ ಮನೆಯವರನ್ನು ಒಪ್ಪಿಸಿ ಪ್ರಿಯತಮೆಯೊಂದಿಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಮೇ 11ರಂದು ಗ್ರಾಮದ ಜಾತ್ರೆಗೆ ಬೆಂಗಳೂರಿನಿಂದ ಬರುತ್ತಿದ್ದ ಧನುಷ್ ನೆಲಮಂಗಲದ ಕುಲಾನಹಳ್ಳಿ ಬಳಿ ಅಪಘಾತದಲ್ಲಿ ಮೃಪಟ್ಟಿದ್ದಾರೆ.
ಮದುವೆಯಾಗಬೇಕಿದ್ದ ಯುವಕ ಮೃತಪಟ್ಟ ಸುದ್ದಿ ತಿಳಿದು ಸುಷ್ಮಾ ತೀವ್ರವಾಗಿ ನೊಂದಿದ್ದಳು. ಅಲ್ಲದೆ ಯುವಕನ ಶವಸಂಸ್ಕಾರದಲ್ಲಿಯೂ ಭಾಗಿಯಾಗಿದ್ದಳು. ಘಟನೆಯಿಂದ ಬೆಚ್ಚಿಬಿದ್ದಿದ್ದ ಸುಷ್ಮಾ ಮನನೊಂದು ಮನೆಗೆ ಬಂದು ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಅದ್ರಂತೆ ಶವಸಂಸ್ಕಾರ ಮುಗಿಸಿಕೊಂಡು ಬಂದವಳು, ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ತಕ್ಷಣ ಪೋಷಕರು ಆಕೆಯನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಂತಿಮವಾಗಿ ಸುಷ್ಮಾ ಬದುಕುಳಿಯಲೇ ಇಲ್ಲ. ಈ ಆತ್ಮಹತ್ಯೆಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದುವೆಗೆ 10 ದಿನ ಬಾಕಿ ಇರುವಾಗಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ