ತುಮಕೂರು: ಆಂಧ್ರ ಪ್ರದೇಶದ ರಾಯದುರ್ಗದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಜಿಲ್ಲೆಯ ಶಿರಾಗೆ ಬಂದಿದ್ದ ಓರ್ವ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ಜೂನ್ 22ರಂದು ತನ್ನ ತಂದೆಯೊಂದಿಗೆ ವಿದ್ಯಾರ್ಥಿ ಶಿರಾಗೆ ಬಂದಿದ್ದ. ಅಲ್ಲದೆ ಜೂ. 24ರಂದು ಬೆಳಿಗ್ಗೆ ವಿದ್ಯಾರ್ಥಿಯ ತಾಯಿಗೆ ರಾಯದುರ್ಗದಲ್ಲಿ ಸೋಂಕು ಇರುವುದು ದೃಢವಾಗಿತ್ತು. ಈ ಹಿನ್ನೆಲೆ ಶಿರಾಗೆ ಬಂದಿದ್ದ ವಿದ್ಯಾರ್ಥಿಯ ಗಂಟಲು ದ್ರವ ಪರೀಕ್ಷೆ ನಡೆಸಿ, ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ವಿದ್ಯಾರ್ಥಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಸೋಂಕಿತ ವಿದ್ಯಾರ್ಥಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಫ್ರೆಶ್ ಕ್ಯಾಂಡಿಡೇಟ್ ಎಂದು ಪರಿಗಣಿಸಿ, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವುದಾಗಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ. ವಿದ್ಯಾರ್ಥಿಯ ತಂದೆಯನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರನ್ನ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಪಟ್ಟನಾಯಕನಹಳ್ಳಿಯನ್ನ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ, ಸೀಲ್ ಡೌನ್ ಮಾಡಲಾಗಿದೆ.