ತುಮಕೂರು: ಕೊರೊನಾ ಸೋಂಕು ಹರಡುವಿಕೆ ಭೀತಿ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಇನ್ನು, ವಾಹನಗಳ ಸಂಚಾರ ಕೂಡ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ.
ಜಿಲ್ಲೆಯ ಕ್ಯಾತ್ಸಂದ್ರ ಬಳಿಯಿರುವ ಟೋಲ್ ಗೇಟ್ ಮೂಲಕ ಮುಂಬೈ ಹಾಗೂ ಪುಣೆ ಕಡೆಗೆ ಹೋಗುವ ವಾಹನಗಳ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಮುಖ್ಯವಾಗಿ ಮುಂಬೈಗೆ ಹೋಗುತ್ತಿದ್ದ ಖಾಸಗಿ ಬಸ್ಗಳು ಸಂಚಾರ ಸಂಪೂರ್ಣ ನಿಂತುಹೋಗಿದೆ. ಕೊರೊನಾ ಸೋಂಕು ಹರಡುವಿಕೆಗೂ ಮುನ್ನ ಈ ಟೋಲ್ ಗೇಟ್ ಮೂಲಕ ನಿತ್ಯ ಸುಮಾರು 600 ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿದ್ದವು. ಆದರೆ, ಮುಂಬೈನಲ್ಲಿ ಕೊರೊನಾ ಸೋಂಕು ಮಿತಿಮೀರಿರುವ ಹಿನ್ನೆಲೆ, ಸರಕು-ಸಾಗಾಟ ವಾಹನಗಳು ಮಾತ್ರ ಓಡಾಡುತ್ತಿವೆ.
ಇನ್ನು, ತುಮಕೂರು ಮತ್ತು ಬೆಂಗಳೂರು ನಡುವೆ ಕ್ಯಾತ್ಸಂದ್ರ ಟೋಲ್ ಗೇಟ್ ಮೂಲಕ ಪ್ರತಿದಿನ 150 ಪ್ರಯಾಣಿಕ ಬಸ್ಗಳು ಓಡಾಡುತ್ತಿದ್ದವು. ಆದರೆ, ಇದೀಗ ಶೇಕಡಾ 15ರಷ್ಟು ಬಸ್ಗಳು ಮಾತ್ರ ಸಂಚರಿಸುತ್ತಿವೆ. ಪ್ರತಿ ವೀಕೆಂಡ್ನಲ್ಲಿ ಸಂಚರಿಸುತ್ತಿದ್ದ ಕಾರುಗಳ ಸಂಖ್ಯೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಶೇಕಡಾ 50ರಷ್ಟು ಕಾರುಗಳು ಮಾತ್ರ ಸಂಚರಿಸುತ್ತಿವೆ.
ಒಟ್ಟಾರೆ, ಕೊರೊನಾ ಸೋಂಕು ಹರಡುವಿಕೆಗೂ ಮುನ್ನ ಬೆಂಗಳೂರಿನಿಂದ ಈ ಟೋಲ್ಗೇಟ್ ಮೂಲಕ ನಿತ್ಯ ಕನಿಷ್ಠ 22,000 ವಾಹನಗಳು ಸಂಚರಿಸುತ್ತಿದ್ದವು. ಆದ್ರೀಗ ಕೇವಲ 13,000 ವಾಹನಗಳು ಮಾತ್ರ ಸಂಚರಿಸುತ್ತಿದ್ದು, ಜನರ ಓಡಾಟ ಶೇಕಡ 50ರಷ್ಟು ಕಡಿಮೆಯಾಗಿದೆ.