ತುಮಕೂರು: ಮಹಾಮಾರಿ ಕೊರೊನಾ ಎರಡನೇ ಅಲೆ ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ. ಇದರಿಂದ ಒಂದೆಡೆ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸುತ್ತಿದ್ದರೆ, ಮತ್ತೊಂದೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಲ್ಲದೆ, ವಯಸ್ಕರಿಗೆ ಒಂದು ರೀತಿಯ ಸಮಸ್ಯೆಯಾಗಿದ್ದ ಕೊರೊನಾ ಸದ್ಯ ಮಕ್ಕಳ ಮೇಲೆ ಸವಾರಿ ಮಾಡುತ್ತಿದೆ.
ಹದಿಹರೆಯದ ಮಕ್ಕಳ ಮೇಲೂ ಕೋವಿಡ್ ಕರಿಛಾಯೆ ಬಿದ್ದಿದ್ದು, ಐದು ವರ್ಷದೊಳಗಿನ ಮಕ್ಕಳ ಮೇಲೆ ಆಕ್ರಮಣ ಮಾಡುತ್ತಿದೆ. ಕಳೆದ ಮೂರು ದಿನಗಳಲ್ಲಿ ಬರೋಬ್ಬರಿ 69 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ನಿತ್ಯ 15ಕ್ಕೂ ಹೆಚ್ಚು ಐದು ವರ್ಷದೊಳಗಿನ ಮಕ್ಕಳಿಗೆ ತಗುಲುತ್ತಿದೆ ಸೋಂಕು
ಮಕ್ಕಳನ್ನು ದೈಹಿಕವಾಗಿ ಕುಗ್ಗಿಸುತ್ತಿರುವ ಸೋಂಕು, ಇತರ ಮಕ್ಕಳಿಗೂ ಇದು ಬಹು ಬೇಗನೆ ವ್ಯಾಪಿಸುತ್ತಿದೆ. ಒಮ್ಮೆ ಮಕ್ಕಳಿಗೆ ಇದು ವಕ್ಕರಿಸಿದರೆ ಮನೆಯ ಎಲ್ಲಾ ಸದಸ್ಯರಿಗೂ ಹರಡುವುದು ಗ್ಯಾರಂಟಿ ಎಂಬಂತಾಗಿದೆ.
ಸೋಂಕಿತ ಮಕ್ಕಳ ರಕ್ಷಣೆಗೆ ಸಜ್ಜಾದ ಮಕ್ಕಳ ರಕ್ಷಣಾ ಘಟಕ
ಸದ್ಯ, ಸೋಂಕಿಗೆ ಒಳಗಾದ ಮಕ್ಕಳ ರಕ್ಷಣೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮುಂದಾಗಿದ್ದು, ಕೋವಿಡ್ ಸೋಂಕಿಗೆ ಒಳಗಾದ ಪೋಷಕರ ಸೋಂಕಿತ ಮಕ್ಕಳು ಮತ್ತು ಸೋಂಕಿನಿಂದ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಲಾಲನೆ ಪಾಲನೆ ಮಾಡಲು ಮಹತ್ತರ ಹೆಜ್ಜೆ ಇಟ್ಟಿದೆ.
ಒಟ್ಟಾರೆಯಾಗಿ, ಜಿಲ್ಲೆಯಲ್ಲಿ ನಿತ್ಯವೂ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ತಲುಪುತ್ತಿದ್ದು, ಇದರಲ್ಲಿ ಇತ್ತೀಚಿಗೆ ಹೋಂ ಐಸೋಲೇಷನ್ ಕಾರಣದಿಂದಾಗಿ ಮನೆಯ ಮಕ್ಕಳಿಗೆ ಕೋವಿಡ್ ಸೋಂಕು ಬಹುಬೇಗನೆ ತಗುಲುತ್ತಿದೆ. ಇದೀಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಕ್ಕಳ ನೆರವಿಗೆ ಬಂದಿರುವುದು ಉತ್ತಮ ನಡೆಯಾಗಿದೆ.