ತುಮಕೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆಯಿಂದಾಗಿ ಬರಪೀಡಿತ ಪ್ರದೇಶಗಳಲ್ಲಿ ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ತೊಂದರೆ ಆಗುತ್ತಿದೆ. ಹಾಗಾಗಿ ಸಂಹಿತೆಯನ್ನು ತೆರವುಗೊಳಿಸಬೇಕೆಂದು ಜಿಲ್ಲೆಯ ಬಿಜೆಪಿ ಶಾಸಕರು ಒತ್ತಾಯಿಸಿದರು.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸಾಧ್ಯವಾಗುತ್ತಿಲ್ಲ. ಅಕಸ್ಮಾತ್ ಅಧಿಕಾರಿಗಳ ಬಳಿ ಕೇಳಲು ಹೋದರೆ ಮಾಡೆಲ್ ಕೋಡ್ ಆಫ್ ಕಂಡಕ್ಟ್ ಜಾರಿಯಲ್ಲಿರುವ ಕುರಿತು ಸಬೂಬು ಹೇಳುತ್ತಾರೆ. ಟ್ಯಾಂಕರ್ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ, ಅವರೂ ಸಹ ಅಸಹಾಯಕರಾಗಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಹೇಳಿದರು.
ರಾಜ್ಯ ಸರ್ಕಾರ ಈ ಸಮಸ್ಯೆಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತರಬೇಕಿದೆ. ಜನರ ಸಮಸ್ಯೆಗೆ ಸ್ಪಂದಿಸಲು ಆಗದ ನನಗೆ ಶಾಸಕ ಸ್ಥಾನದ ಹುದ್ದೆಯಲ್ಲಿರಲು ನಾಚಿಕೆ ಆಗುತ್ತಿದೆ ಎಂದು ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜೆ ಸಿ ಮಾಧುಸ್ವಾಮಿ, ಜ್ಯೋತಿ ಗಣೇಶ್, ನಾಗೇಶ್ ಹಾಗು ಮಸಾಲೆ ಜಯರಾಮ್ ಉಪಸ್ಥಿತರಿದ್ದರು.