ಶಿವಮೊಗ್ಗ: ಶ್ರೀ ರಾಘವೆಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥರು ಹಾಗೂ ಅವರ ಅನುಯಾಯಿಗಳು ನವ ವೃಂದಾವನದಲ್ಲಿರುವ ಉತ್ತರಾಧಿ ಮಠದ ರಘುವರ್ಯ ತೀರ್ಥರ ವೃಂದಾವನವನ್ನು ಕಬಳಿಸುವ ಯತ್ನ ನಡೆಸಿದ್ದಾರೆ ಎಂದು ಉತ್ತರಾಧಿ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಗೋಪಿನಾಥ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವ ವೃಂದಾವನ ಗಡ್ಡಿ, ಆನೆಗೊಂದಿಯಲ್ಲಿ ಮಾಧ್ವ ಪರಂಪರೆಗೆ ಸೇರಿದ 9 ಯತಿವರೇಣ್ಯ ವೃಂದಾವನಗಳಿವೆ. ಈ ಪೈಕಿ ರಘುವರ್ಯ ತೀರ್ಥರು ಉತ್ತರಾಧಿ ಮಠದ ಪರಂಪರೆಯಲ್ಲಿ ಬಂದವರಾಗಿದ್ದಾರೆ. ಈ ಒಂಬತ್ತು ವೃಂದಾವನಗಳ ಪೈಕಿ ಪದ್ಮಾನಾಭ್ ತೀರ್ಥರು, ಕವೀಂದ್ರ ತೀರ್ಥರು, ವಾಗೀಶ ತೀರ್ಥರ ಪೂಜಾ ಆರಾಧನೆಗಳ ಬಗ್ಗೆ ವಿವಾದವಿದೆ.
ಉಳಿದ ಯತಿಗಳ ಬಗ್ಗೆ ಯಾವುದೇ ವಿವಾದಗಳಿಲ್ಲ. ವಾಸ್ತವವಾಗಿ ಜಯತೀರ್ಥರ ವೃಂದಾವನ ಕಲಬುರಗಿ ಜಿಲ್ಲೆಯ ಸೇಡಂನ ಮೇಳಖೇಡದಲ್ಲಿದೆ. ಇಷ್ಟೆಲ್ಲಾ ಇದ್ದರೂ ಸಹ ಮಂತ್ರಾಲಯ ಮಠದ ಶ್ರೀಗಳು ಮತ್ತು ಅನುಯಾಯಿಗಳು ರಘುವರ್ಯ ತೀರ್ಥರ ವೃಂದಾವನವನ್ನು ಜಯತೀರ್ಥ ವೃಂದವನ ಎಂದು ಹೇಳುವ ಮೂಲಕ ಭಕ್ತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಈ ಹುನ್ನಾರವನ್ನು ಉತ್ತರಾಧಿ ಮಠ ಅತ್ಯಂತ ಗಂಭೀರವಾಗಿ ವಿರೋಧಿಸುತ್ತದೆ. ಮಂತ್ರಾಲಯ ಶ್ರೀಗಳು, ತಮ್ಮ ಶಿಷ್ಯರು ಮತ್ತು ಅನುಯಾಯಿಗಳಿಗೆ ಈ ಕೃತ್ಯ ಮುಂದುವರೆಸದಂತೆ ಸೂಚಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: Bomb blast on rail tracks: ರೈಲು ಹಳಿಗಳ ಮೇಲೆ ಬಾಂಬ್ ಸ್ಫೋಟ: ಹಳಿ ತಪ್ಪಿದ ಡೀಸೆಲ್ ಲೊಕೋಮೋಟಿವ್