ಶಿವಮೊಗ್ಗ: ರಾಜ್ಯದ ಅತೀ ಚಿಕ್ಕ ಅಣೆಕಟ್ಟು ಎಂಬ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ತುಂಗಾ ಅಣೆಕಟ್ಟು ಭರ್ತಿಯಾಗಿದೆ. ಮುಂಗಾರಿನ ಪ್ರಾರಂಭದಲ್ಲೇ ಅಣೆಕಟ್ಟು ತುಂಬಿರುವುದು ಶಿವಮೊಗ್ಗ ತಾಲೂಕು, ಹೊನ್ನಾಳಿ ಸೇರಿದಂತೆ ಹಾವೇರಿ ಜಿಲ್ಲೆಯ ರೈತರಲ್ಲಿ ಸಂತಸ ತಂದಿದೆ.
ತುಂಗಾ ಮೇಲ್ದಂಡೆ ಯೋಜನೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಡ್ಯಾಂಗೆ ಪೊಜೆ ಸಲ್ಲಿಸಿ 4 ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಬಿಡಲಾಯಿತು. ಸದ್ಯ ನದಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತದೆ. ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ತಲಾ 500 ಕ್ಯೂಸೆಕ್ ನೀರಿನಂತೆ 2 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಅದೇ ರೀತಿ ಕಳೆದ ಮೂರು ದಿನಗಳಿಂದ ಅಣೆಕಟ್ಟೆ ಬಳಿಯ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ 4 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
ತುಂಗಾ ಅಣೆಕಟ್ಟೆಯ ನೀರಿನ ಸಂಗ್ರಹ:
ತುಂಗಾ ಅಣೆಕಟ್ಟು 3.24 ಟಿಎಂಸಿ ನೀರು ಸಂಗ್ರಹಿಸುವ ಸಾರ್ಮರ್ಥ್ಯ ಹೊಂದಿದೆ. ಅಣೆಕಟ್ಟೆಯಲ್ಲಿ 3.01 ಟಿಎಂಸಿ ನೀರು ಸಂಗ್ರಹ ಇರುವುದರಿಂದ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನದಿಗೆ ನೀರು ಬಿಡಲಾಗುತ್ತಿದೆ.
ಅಣೆಕಟ್ಟೆಗೆ 7 ಸಾವಿರ ಕ್ಯೂಸೆಕ್ ನೀರು ಒಳಹರಿವಿದೆ. ಇದರಿಂದ ನದಿಗೆ ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ನೀರು ಬಿಡಲಾಯಿತು. ನದಿ ಹಿನ್ನೀರಿನ ಪ್ರದೇಶಗಳಾದ ಶೃಂಗೇರಿ, ಆಗುಂಬೆ ಹಾಗೂ ತೀರ್ಥಹಳ್ಳಿಯಲ್ಲಿ ಮಳೆಯಾದರೆ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಲಿದೆ. ಅಣೆಕಟ್ಟೆ ನೀರನ್ನು ಮುಖ್ಯವಾಗಿ ಶಿವಮೊಗ್ಗ ನಗರಕ್ಕೆ ಕುಡಿಯಲು ಪೂರೈಕೆ ಮಾಡಲಾಗುತ್ತದೆ. ಅದೇ ರೀತಿ ಎಡ ಮತ್ತು ಬಲ ದಂಡೆಯ ಮೂಲಕ ಶಿವಮೊಗ್ಗ ತಾಲೂಕು ಹಾಗೂ ದಾವಣಗೆರೆ ಜಿಲ್ಲೆಯ ಹೂನ್ನಾಳಿ ತಾಲೂಕಿನ ರೈತರ ಕೃಷಿಗೆ ನೀರು ಹರಿಸಲಾಗುತ್ತದೆ ಎನ್ನುತ್ತಾರೆ ತುಂಗಾ ಮೇಲ್ದಂಡೆ ಯೋಜನೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ರಮೇಶ್.
ಉಳಿದಂತೆ ತುಂಗಾ ಮೇಲ್ದಂಡೆ ಯೋಜನೆಯಡಿ ಹಾವೇರಿ ಜಿಲ್ಲೆಯ ಹಾವೇರಿ ಹಾಗೂ ರಾಣೆಬೆನ್ನೂರು ತಾಲೂಕುಗಳಿಗೆ ನೀರು ಹರಿಸಲಾಗುತ್ತದೆ. ತುಂಗಾ ಮೇಲ್ದಂಡೆ ಯೋಜನೆಗೆ ಜುಲೈನಲ್ಲಿ ನೀರು ಹರಿಸಲಾಗುತ್ತದೆ. ಎಡ ಹಾಗೂ ಬಲ ದಂಡೆಯ ನಾಲೆಗಳಿಗೆ ಕೃಷಿಗಾಗಿ ನೀರು ಹರಿಸಲಾಗುತ್ತದೆ. ತುಂಗಾ ಅಣೆಕಟ್ಟೆಯಿಂದ ಒಟ್ಟು 89.199 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುತ್ತದೆ.
ಅಣೆಕಟ್ಟೆಯಲ್ಲಿ ಹೂಳು ತುಂಬಿದ ಕಾರಣಕ್ಕೆ ಬೇಗ ತುಂಬಿದೆ:
ಅಣೆಕಟ್ಟೆಯಲ್ಲಿ ವಿಪರೀತ ಹೂಳು ತುಂಬಿದೆ. ಇದನ್ನು ತೆಗೆಯದೆ ಹೋದರೆ ನೀರಿನ ಸಂಗ್ರಹ ಕಡಿಮೆಯಾಗುತ್ತದೆ. ಅಣೆಕಟ್ಟು ಬೇಗ ಡ್ಯಾಂ ತುಂಬಿದೆ. ಆದರೆ ನೀರಿನ ಸಂಗ್ರಹವಾಗಲ್ಲ. ಈ ಹಿಂದೆ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದ್ದವು. ಆದರೆ ಈಗ ಅದು ನಡೆಯಬೇಕಿದೆ. ಶಿವಮೊಗ್ಗದ ತುಂಗಾ ಅಣೆಕಟ್ಟು ತುಂಬಿರುವುದು ನಮಗೆಲ್ಲಾ ಸಂತಸ ತಂದಿದೆ ಎನ್ನುತ್ತಾರೆ ಶಿವಮೊಗ್ಗದ ನಿವಾಸಿ ನಂದನ್.