ಶಿವಮೊಗ್ಗ: ಪೊಲೀಸರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ₹ 3 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗದ ಹರಕೆರೆ ಬಳಿ ನಡೆದಿದೆ.
ಶಿವಮೊಗ್ಗದಿಂದ ಗಾಜನೂರು ರಸ್ತೆಯ ಹರಕರೆಯ ನಾರಾಯಣ ಹೃದಯಾಲಯದ ಮುಂಭಾಗ ದಂಪತಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿದ ಇಬ್ಬರು, ನಾವು ಪೊಲೀಸರು, ಇಂದು ಎರಡು ಕಡೆ ಬಂಗಾರದ ಸರ ಅಪಹರಣ ಪ್ರಕರಣಗಳು ನಡೆದಿವೆ. ನೀವು ಹೀಗೆಲ್ಲ ಒಡವೆ ಹಾಕಿಕೊಂಡು ಹೋಗಬೇಡಿ ಎಂದು ಹೇಳಿದ್ದಾರೆ. ದಂಪತಿ ಮೈ ಮೇಲೆ ಇದ್ದ ಒಡವೆಗಳನ್ನು ಬಿಚ್ಚಿಕೊಂಡು ಹೋಗುವಂತೆ ತಿಳಿಸಿದ್ದಾರೆ.
ಪೊಲೀಸರೇ ಹೇಳಿದ್ದಾರೆ ಎಂದುಕೊಂಡು ದಂಪತಿ ನಂಬಿದ್ದಾರೆ. ತಕ್ಷಣ ಮಹಿಳೆ ತನ್ನ 60 ಗ್ರಾಂ ಮಾಂಗಲ್ಯಸರ, ಉಂಗುರ, ಪತಿ ಬಳಿ ಇದ್ದ ಉಂಗುರ ಹಾಗೂ ಕೊರಳಿನ ಚೈನ್ಅನ್ನು ತಮ್ಮ ಕರ್ಚಿಪ್ನಲ್ಲಿ ಕಟ್ಟಿಕೊಳ್ಳಲು ಮುಂದಾಗಿದ್ದಾರೆ.
ಈ ವೇಳೆ ಖದೀಮರು ನಮಗೆ ಕೊಡಿ, ಇನ್ನೂ ಚೆನ್ನಾಗಿ ಕಟ್ಟಿ ಕೊಡುತ್ತೇವೆ ಎಂದು ದಂಪತಿಯಿಂದ ಕರ್ಚಿಪ್ ಪಡೆದುಕೊಂಡಿದ್ದಾರೆ. ದಂಪತಿ ಮಾತನಾಡಿಸುವಷ್ಟರಲ್ಲಿ ಕರ್ಚಿಪ್ ಅದಲು-ಬದಲು ಮಾಡಿ ದಂಪತಿಗೆ ಕೊಟ್ಟು ಪರಾರಿಯಾಗಿದ್ದಾರೆ.
ಸ್ವಲ್ಪ ದೂರ ಹೋಗಿ ದಂಪತಿ ಕರ್ಚಿಪ್ ನೋಡಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ಈ ಕುರಿತು ದಂಪತಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪಿಎಸ್ಐ 'ಈಟಿವಿ ಭಾರತ್'ಗೆ ಸ್ಪಷ್ಟಪಡಿಸಿದ್ದಾರೆ.