ಶಿವಮೊಗ್ಗ : ರಾಜ್ಯದ ಎಲ್ಲಾ ಶಾಸಕರಿಗೆ ನೀಡಿರುವ ಗನ್ ಮ್ಯಾನ್ ವ್ಯವಸ್ಥೆ ತೆಗೆದು ಹಾಕಬೇಕು. ಜೊತೆಗೆ ಔರಾದ್ಕರ್ ವರದಿಯನ್ನು ಸರ್ಕಾರ ಮರು ವಿಮರ್ಶೆಗೆ ಒಳಪಡಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲೆಂದು ಸರ್ಕಾರ ರಚಿಸಿರುವ ಔರಾದ್ಕರ್ ವರದಿಯಲ್ಲೇ ಸಾಕಷ್ಟು ನ್ಯೂನತೆಗಳಿವೆ. ಈ ಸಮಿತಿ ಪಾರದರ್ಶಕವಾಗಿ ಸಿಬ್ಬಂದಿ ಸಮಸ್ಯೆಗಳನ್ನು ನಿವಾರಿಸುವ ಕಾರ್ಯವನ್ನು ಈವರೆಗೆ ಮಾಡಿಲ್ಲ ಎಂದರು.
ವೇತನ ತಾರತಮ್ಯ ತಳಮಟ್ಟದ ಸಿಬ್ಬಂದಿಯಲ್ಲಿ ಹಾಗೆಯೇ ಮುಂದುವರೆದಿದೆ. ಅಲ್ಲದೆ ಹೊಸದಾಗಿ ನೇಮಕವಾದವರಿಗೂ ಒಂದೇ ಸಂಬಳ, ಇಲಾಖೆಯಲ್ಲಿ ಎಳೆಂಟು ವರ್ಷ ಸೇವೆ ಸಲ್ಲಿಸಿದ ಸಿಬ್ದಂದಿಗೂ ಒಂದೇ ಸಂಬಳ. ಇದು ಕರ್ತವ್ಯ ನಿರ್ವಹಿಸುವ ಪೊಲೀಸರಲ್ಲಿ ನೌಕರ ವಿರೋಧಿ ಭಾವನೆ ಮೂಡುವಂತೆ ಮಾಡುವುದಿಲ್ಲವೇ. ಅವರ ನೈತಿಕ ಸ್ಥೈರ್ಯ ಕುಂದುವಂತೆ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪೊಲೀಸರ ಒತ್ತಡ ಕಡಿಮೆ ಮಾಡುವ ಬಗ್ಗೆ ಸಮಿತಿ ನೀಡಿದ ವರದಿಯಲ್ಲಿ ಪ್ರಸ್ತಾಪವಿಲ್ಲ: ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಇಲಾಖೆಯಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸಿವಿಲ್ ಪೊಲೀಸರಂತೆ ರಿಸರ್ವ್ ಪೊಲೀಸರು ಪರೀಕ್ಷೆ ಬರೆದು, ಅವರಂತೆ ತರಬೇತಿ ಪಡೆದು, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಬರುತ್ತಾರೆ. ಆದರೆ ಅವರನ್ನು ಅಧಿಕಾರಿಗಳ ಮನೆಯಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತೆ. ಶಾಸಕರಿಗೆ ಹಾಗು ವಿಐಪಿಗಳಿಗೆ ಗನ್ ಮ್ಯಾನ್ ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಚೆನ್ನಾಗಿ ಓದಿ ಉತ್ತಮ ಸಂಬಳ ಪಡೆಯುವ ರಿಸರ್ವ್ ಪೊಲೀಸ್ ಸಿಬ್ಬಂದಿಯನ್ನು ಸಿವಿಲ್ ಪೊಲೀಸ್ ಆಗಿ ಕೂಡ ಹುದ್ದೆ ನೀಡಬಹುದು. ಈ ಬಗ್ಗೆ ವಿಧಾನ ಪರಿಷತ್ ನಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದ್ದೇನೆ ಎಂದರು.
ರಿಸರ್ವ್ ಪೊಲೀಸರಿಗೆ ನ್ಯಾಯಕೊಡಿಸಲೆಂದು ಔರಾದ್ಕರ್ ವರದಿಯನ್ನು ಮರು ಪರಿಶೀಲಿಸಲು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇನೆಯೇ ಹೊರತು, ಈ ಕುರಿತು ಪೊಲೀಸರನ್ನು ಪ್ರಚೋದಿಸುತ್ತಿಲ್ಲ. ರಾಜ್ಯದ ಎಲ್ಲಾ ಶಾಸಕರಿಗೆ ನೀಡಿರುವ ಗನ್ ಮ್ಯಾನ್ ವ್ಯವಸ್ಥೆ ತೆಗೆದು ಹಾಕಿ ಎಂದು ಸರ್ಕಾರಕ್ಕೆ ಆಗ್ರಹಿಸಿದ ಅವರು, ಈ ಹಿಂದೆ ಶಾಸಕರಿಗೆ ಗನ್ ಮ್ಯಾನ್ ವ್ಯವಸ್ಥೆ ಇರಲಿಲ್ಲ. ಈಗ ಎಲ್ಲಾ ಶಾಸಕರಿಗೂ ಗನ್ ಮ್ಯಾನ್ ನೀಡಲಾಗಿದೆ. ರಿಸರ್ವ್ ಪೊಲೀಸರನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ಶೋಭೆ ತರುವುದಿಲ್ಲ. ಜನಪ್ರತಿನಿಧಿಯಾದವನು ಮುಕ್ತವಾಗಿ ಜನರ ಬಳಿ ಹೋಗಬೇಕು. ಯಾರಿಗೆ ಜೀವಭಯವಿದೆಯೋ ಅಂತವರಿಗೆ ಭದ್ರತೆ ನೀಡಿ ಎಂದು ಸಲಹೆ ನೀಡಿದರು.
ಅನಾವಶ್ಯಕವಾಗಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಸರ್ಕಾರ ಕೂಡಲೇ ಔರಾದ್ಕಕರ್ ವರದಿ ಮರು ಪರಿಶೀಲನೆಗೊಳಪಡಿಸಬೇಕು. ಇಲ್ಲವಾದರೆ ಕಾನೂನು ಹೋರಾಟಕ್ಕೂ ನಾನು ಸಿದ್ಧ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಉಪಸ್ಥಿತರಿದ್ದರು.
ಓದಿ : ಕೊಲೆಯಾದ ಹರ್ಷನ ಹೆಸರಿನಲ್ಲಿ ಪ್ರಾರಂಭವಾಯ್ತು ಚಾರಿಟೇಬಲ್ ಟ್ರಸ್ಟ್ : ಟ್ರಸ್ಟ್ನ ಗುರಿ ಏನು?