ಶಿವಮೊಗ್ಗ : ಕೊರೊನಾ ಲಾಕ್ಡೌನ್ ಎಲ್ಲಾ ಉತ್ಪಾದನಾ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ರೆ ಹಾಲು ಉತ್ಪಾದನೆಗೆ ಮಾತ್ರ ಪೂರಕವಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. ಶಿಮುಲ್ ವ್ಯಾಪ್ತಿಯಲ್ಲಿ ಹಸುಗಳ ಸಂಖ್ಯೆಯೇನೂ ಜಾಸ್ತಿ ಆಗಿಲ್ಲ. ಆದರೆ, ಹಾಲು ಉತ್ಪಾದನೆ ಮಾತ್ರ ಗಣನೀಯವಾಗಿ ಜಾಸ್ತಿಯಾಗಿದೆ. ಲಾಕ್ಡೌನ್ಗೂ ಮುನ್ನ ಶಿಮುಲ್ಗೆ ಪ್ರತಿದಿನ 4.5 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಆದರೆ, ಲಾಕ್ಡೌನ್ ಆದ ಬಳಿಕ ಪ್ರತಿದಿನ 6.4 ಲಕ್ಷ ಲೀಟರ್ ಹಾಲು ಬರುತ್ತಿದೆ.
ಹಾಲು ಉತ್ಪಾದನೆ ಹೆಚ್ಚಳಕ್ಕೆ ಕಾರಣ : ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗಿದ್ದ ಹಳ್ಳಿಯ ಯುವ ಜನತೆ ತಮ್ಮ ಹಳ್ಳಿಗಳಿಗೆ ವಾಪಸ್ ಆಗಿದ್ದಾರೆ. ಆದರೆ, ಹಳ್ಳಿಗೆ ಬಂದ ಯುವಕರು ಉದ್ಯೋಗವಿಲ್ಲದ್ದರಿಂದ ತಮ್ಮ ಮನೆಯಲ್ಲಿದ್ದ ಹಸುಗಳಿಗೆ ಹೆಚ್ಚಿನ ಮೇವನ್ನ ತಂದು ಹಾಕಲಾರಂಭಿಸಿದ್ದಾರೆ. ಪರಿಣಾಮ ಹಸುಗಳು ನೀಡುವ ಹಾಲಿನ ಪ್ರಮಾಣವೂ ಹೆಚ್ಚಾಗಿದೆ ಎಂದು ಶಿಮುಲ್ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ.
ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದ್ರೆ ಮಾರಾಟದ ಪ್ರಮಾಣ ಕುಸಿದಿದೆ. ಹೀಗಾಗಿ ಶಿಮುಲ್ಗೆ ಹೊಸ ಸಮಸ್ಯೆ ಎದುರಾಗಿದೆ. ಪ್ರಸ್ತುತ 6.4 ಲಕ್ಷ ಲೀಟರ್ ಹಾಲು ಬರುತ್ತಿದೆ. ಮಾರಾಟವಾಗುತ್ತಿರುವುದು ಕೇವಲ 2 ಲಕ್ಷ ಲೀಟರ್ ಮಾತ್ರ. ಉಳಿದ 4.4 ಲಕ್ಷ ಲೀಟರ್‌ನಲ್ಲಿ ಒಂದು ಲಕ್ಷ ಲೀ. ಹಾಲನ್ನು ಇತರೆ ಡೈರಿಗಳಿಗೆ ನೀಡಲಾಗುತ್ತಿದೆ. ಬಾಕಿ ಉಳಿದ 3.4 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿ ಹಾಗೂ ಇತರೆ ಉತ್ಪನ್ನಗಳ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ.
ಲಾಕ್ಡೌನ್ ಹಿನ್ನೆಲೆ ಸಭೆ-ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿಲ್ಲ. ಇದರಿಂದಾಗಿ ಶಿಮುಲ್ನ ಹಾಲು ಮಾರಾಟ ಸಹ ಕುಸಿದಿದೆ. ಹೀಗಾಗಿ ಕೆಎಂಎಫ್ನ ನಂದಿನಿ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುವಂತೆ ಶಿಮುಲ್ ಹಾಲು ಒಕ್ಕೂಟ ಮನವಿ ಮಾಡಿದೆ.