ಶಿವಮೊಗ್ಗ: ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಕುರಿತು ಕರೆಯಲಾದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಿತ್ಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಶನಿವಾರ ಮತ್ತು ಭಾನುವಾರ ವಾರಾಂತ್ಯದ ಕರ್ಫ್ಯೂ ಘೋಷಿಸಲಾಗಿದ್ದು, ಇದನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. ಪ್ರವಾಸಿ ತಾಣಗಳಿಗೆ ಪ್ರವೇಶ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಈ ದಿನಗಳಲ್ಲಿ ಅವಕಾಶ ಇರುವುದಿಲ್ಲ. ಆದರೆ, ಅಗತ್ಯ ಸೇವೆಗಳನ್ನು ಒದಗಿಸಲು ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದರು.
ಸರ್ಕಾರದ ನಿಗದಿತ ಮಾರ್ಗಸೂಚಿ ಪ್ರಕಾರ ಶಾಲಾ - ಕಾಲೇಜು ನಡೆಸಬೇಕು. ಯಾವುದೇ ನಿಗದಿತ ವ್ಯಾಪ್ತಿಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ ಅದನ್ನು ಕ್ಲಸ್ಟರ್ ಎಂದು ಗುರುತಿಸಲಾಗುವುದು. ಅಂತಹ ಕ್ಲಸ್ಟರ್ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳನ್ನು ಮುಚ್ಚಲು ಕ್ರಮ ವಹಿಸಲಾಗುವುದು.
ಕೋವಿಡ್ ಹರಡುವಿಕೆ ತಡೆಯಲು ವಸತಿ ಶಾಲೆಗಳು, ಆಶ್ರಯ ತಾಣಗಳು ಮುಂತಾದ ಕಡೆಗಳಲ್ಲಿ ನಿರಂತರವಾಗಿ ರ‍್ಯಾಂಡಮ್ ಸ್ಯಾಂಪಲ್ ಸಂಗ್ರಹ ಮಾಡಿ ತಪಾಸಣೆ ನಡೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸುವ ಪೂರ್ವದಲ್ಲಿ ಸ್ಥಳೀಯಾಡಳಿತದಿಂದ ಅನುಮತಿ ಕಡ್ಡಾಯವಾಗಿ ಪಡೆದಿರಬೇಕು ಎಂದು ಹೇಳಿದರು.
ಮಾಹಿತಿ ಸಂಗ್ರಹಿಸಿ ನಿಗಾ ಇಡಿ
ಮಹಾರಾಷ್ಟ್ರ, ಕೇರಳ, ಗೋವಾ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ರ‍್ಯಾಂಡಮ್ ತಪಾಸಣೆ ಮಾಡಬೇಕು. ಇದಕ್ಕಾಗಿ ಶಿವಮೊಗ್ಗ, ಭದ್ರಾವತಿ ಬಸ್ ನಿಲ್ದಾಣ ಹಾಗೂ ಆಗುಂಬೆ ಚೆಕ್ಪೋಸ್ಟ್ಗಳಲ್ಲಿ ವ್ಯವಸ್ಥೆ ಮಾಡಬೇಕು. ಹೊರ ರಾಜ್ಯ ಮತ್ತು ಹೊರದೇಶಗಳಿಂದ ಬಂದವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ನಿಗಾ ಇರಿಸಬೇಕು.
ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ತಾಲೂಕಿನಲ್ಲಿ ಕನಿಷ್ಠ 150 ಹಾಸಿಗೆ ಸಾಮರ್ಥ್ಯದ ಹಾಸ್ಟೆಲ್ ಅಥವಾ ಸಮುದಾಯ ಭವನಗಳನ್ನು ಗುರುತಿಸಿ ಸಜ್ಜುಗೊಳಿಸಬೇಕು. 15 ವರ್ಷದಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸಿ, ಪ್ರತಿಯೊಬ್ಬರಿಗೂ ಆದಷ್ಟು ಬೇಗ ಲಸಿಕೆ ನೀಡಬೇಕು. ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಯಾವುದೇ ತೊಂದರೆಯಿರುವುದಿಲ್ಲ ಎಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.