ಶಿವಮೊಗ್ಗ: ಮೆಟ್ರೋ ನಗರಿಯಲ್ಲಿ ಜೀವನ ಅರಸಿ ಹೋಗಿದ್ದ ಸಾವಿರಾರು ಮಂದಿ ಈಗ ತವರು ಶಿವಮೊಗ್ಗ ಜಿಲ್ಲೆಗೆ ವಾಪಸ್ ಆಗಿದ್ದಾರೆ. ಹೀಗಾಗಿ, ಅವರಿಗೆ ಸೂಕ್ತ ಅವಕಾಶ ಕಲ್ಪಿಸುವ ಸಲುವಾಗಿ 'ನನ್ನ ಕನಸಿನ ಶಿವಮೊಗ್ಗ' ತಂಡ ಈಗ 'ಸ್ಟೇ@ ಶಿವಮೊಗ್ಗ' ಎಂಬ ಆಂದೋಲನವನ್ನ ಪ್ರಾರಂಭಿಸಿದೆ.
ಆಂದೋಲನದ ಉದ್ದೇಶ ಉದ್ಯೋಗ ನೀಡುವವರು ಹಾಗೂ ಉದ್ಯೋಗಿಗಳಿಗೆ ವೇದಿಕೆ ಕಲ್ಪಿಸುವುದು ಎನ್ನುತ್ತಾರೆ ನನ್ನ ಕನಸಿನ ಶಿವಮೊಗ್ಗದ ಅಧ್ಯಕ್ಷ ಗೋಪಿನಾಥ್. ಈ ಆಂದೋಲನದಲ್ಲಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಸಂಘ, ಜಿಲ್ಲಾ ತರಬೇತಿ ಕೇಂದ್ರ ಹಾಗೂ ನಿರ್ಭಯ ತಂಡ ಸೇರಿದಂತೆ ಹಲವು ಸಂಘ - ಸಂಸ್ಥೆಗಳು ಭಾಗಿಯಾಗಿವೆ.
60 ಸಾವಿರ ಮಂದಿ ವಾಪಸ್: ಉದ್ಯೋಗ ಅರಸಿ ರಾಜಧಾನಿಗೆ ಹೋಗಿದ್ದ ಸುಮಾರು 60 ಸಾವಿರಕ್ಕೂ ಹೆಚ್ಚು ಮಂದಿ ಶಿವಮೊಗ್ಗಕ್ಕೆ ವಾಪಸ್ ಆಗಿದ್ದಾರೆ ಎಂದು ಅಂದಾಜಿಸಲಾಗಿದೆ. ಉದ್ಯಮ ಬೆಳೆಯಲು ಕಾರ್ಮಿಕರು ಅತಿ ಅವಶ್ಯಕ. ಈ ನಿಟ್ಟಿನಲ್ಲಿ 'ಸ್ಟೇ@ ಶಿವಮೊಗ್ಗ' ಉದ್ಯಮಿಗಳಿಗೆ ಹಾಗೂ ಕಾರ್ಮಿಕರಿಗೆ ಕೊಂಡಿಯಾಗಿ ಕೆಲಸ ಮಾಡಲಿದೆ ಎನ್ನುತ್ತಾರೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೋದ್ಯಮ ಸಂಘದ ಮಾಜಿ ಅಧ್ಯಕ್ಷ ಶಂಕರ್.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ: 'ಸ್ಟೇ@ ಶಿವಮೊಗ್ಗ'ದ ಬಗ್ಗೆ ತಿಳಿಯಲು ಹಾಗೂ ಅದರ ಬಗ್ಗೆ ವಿವರಿಸಲು ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಹಾಗೂ ಇನ್ಸ್ಟ್ರಾಗ್ರಾಮ್ಗಳಲ್ಲಿ ಖಾತೆಗಳನ್ನು ತೆರೆಯಲಾಗುತ್ತದೆ. 'ಸ್ಟೇ@ ಶಿವಮೊಗ್ಗ' ವೆಬ್‌ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.