ಶಿವಮೊಗ್ಗ: ಜನವರಿ 2 ಮತ್ತು 3ಕ್ಕೆ ಶಿವಮೊಗ್ಗ ನಗರದಲ್ಲಿ ರಾಜ್ಯ ಬಿಜೆಪಿಯ ವಿಶೇಷ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯ ವಿಶೇಷ ಸಭೆ ಬಹಳ ವರ್ಷದ ನಂತರ ಶಿವಮೊಗ್ಗದ ಪೆಸೆಟ್ ಕಾಲೇಜಿನಲ್ಲಿ ನಡೆಯುತ್ತಿದೆ. ಈ ವಿಶೇಷ ಸಭೆಯ ನಂತರ ರಾಜ್ಯ ಬಿಜೆಪಿಯಲ್ಲಿ ಹೊಸ ತಿರುವು ಕಾಣಲಿದ್ದು, ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚು ಒತ್ತು ನೀಡಲಾಗುತ್ತೆ ಎಂದರು.
ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಅಂದುಕೊಂಡಿರಲಿಲ್ಲ. ಅಧಿಕಾರಕ್ಕೆ ಬರುವತ್ತಾ ಸಾಕಷ್ಟು ಕೆಲಸ ಮಾಡಲಾಯಿತು. ಈಗ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿದ್ದಾರೆ. ಇವರು ಗ್ರಾಮೀಣ ಭಾಗದಲ್ಲೂ ಪಕ್ಷವನ್ನು ಬಲಪಡಿಸಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ ಪ್ರತಿಭೆಗೆ ತಕ್ಕಂತೆ ಜವಾಬ್ದಾರಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ರಾಜಕೀಯ ತಿರುವು ಯಾವ ರೀತಿಯಲ್ಲಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದೆ ನಮ್ಮ ಪಕ್ಷ ಜಾತಿ ಹಾಗೂ ಹಣದ ಬಲವಿಲ್ಲದೆ ಕಾರ್ಯಕರ್ತರ ಶಕ್ತಿಯ ಮೂಲಕವೇ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.