ಶಿವಮೊಗ್ಗ: ರಾಜ್ಯದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಬೆಳಗಾವಿ ಗಲಭೆ ಕುರಿತು ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಇಎಸ್ ಸಂಘಟನೆಯವರು ಮಾಡುತ್ತಿರುವ ಉದ್ಧಟತನವನ್ನು ನಿಭಾಯಿಸುವ ಶಕ್ತಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗಿದೆ. ಇಂತಹ ಕುತಂತ್ರಗಳಿಗೆ ಭಾರತೀಯ ಜನತಾ ಪಾರ್ಟಿ ತಕ್ಕ ಉತ್ತರ ಕೊಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲವೆಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ಹೇಳಲು ಇಷ್ಟಪಡುತ್ತೇನೆ. ಇಂತಹ ವಿಚಾರದಲ್ಲಿ ಸರ್ಕಾರ ಎಚ್ಚರವಾಗಿದ್ದು, ನೀವು ಎಚ್ಚರವಾಗಿರಬೇಕು. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಪ್ರಕರಣದಲ್ಲಿ ಈಗಾಗಲೇ 27 ಜನರನ್ನು ಬಂಧಿಸಲಾಗಿದೆ. ಇನ್ನೂ ಯಾರು ಈ ಪ್ರಕರಣದಲ್ಲಿ ಇದ್ದಾರೋ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ನೀವು ತಿಹಾರ್ ಜೈಲಿಗೆ ಹೋಗಿದ್ದು ಯಾಕೆ?
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರನ್ನು ಲೂಟಿ ರವಿ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದ ಈಶ್ವರಪ್ಪ, ನಾನು ನೇರವಾಗಿ ಡಿ ಕೆ ಶಿವಕುಮಾರ್ ಅವರಿಗೆ ಪ್ರಶ್ನೆ ಕೇಳುತ್ತೇನೆ. ತಿಹಾರ್ ಜೈಲಿಗೆ ಹೋಗಿ ಬಂದವರು ನೀವು. ಯಾಕೆ ತಿಹಾರ್ ಜೈಲಿಗೆ ಹೋಗಿದ್ದೀರಿ ಎಂಬುದನ್ನು ಜನರಿಗೆ ತಿಳಿಸಬೇಕು. ಸಿ ಟಿ ರವಿ ಅವರು ನಿಮ್ಮ ಹಾಗೆ ತಿಹಾರ್ ಜೈಲಿಗೆ ಹೋಗಿಲ್ಲ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದಾರೆ. ಹಾಗಾಗಿ ಸಿ ಟಿ ರವಿ ಅವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಸಮಸ್ಯೆಗಳಿದ್ದರೆ ಟೀಕೆ ಮಾಡಲಿ ಅದಕ್ಕೆ ಉತ್ತರ ನೀಡುತ್ತೇವೆ. ಪಕ್ಷದಲ್ಲಿ ಗೊಂದಲ ಇದ್ದರೆ ಟೀಕೆ ಮಾಡಲಿ ಅದನ್ನು ಬಿಟ್ಟು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಇದರಿಂದ ನಮ್ಮ ಪಕ್ಷದ ಮುಖಂಡರಿಗೆ ನೋವಾಗಿದೆ. ಹಾಗಾಗಿ ಕೂಡಲೇ ಕ್ಷಮೆಯಾಚಿಸಬೇಕು ಎಂದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಧಾನಿಯವರಿಗೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ ಸಚಿವರು, ಮಹಾರಾಷ್ಟ್ರದ ಮುಖ್ಯಮಂತ್ರಿ ಆಕಾಶದಿಂದ ಇಳಿದು ಬಂದವರಲ್ಲ. ಇದಕ್ಕೆ ಕಾಂಗ್ರೆಸ್ ಸರ್ಕಾರ ಉತ್ತರ ನೀಡಬೇಕು, ಭಾಷೆ, ನೆಲ, ಜಲ ಹಾಗೂ ಮಹಾಪುರುಷರ ಬಗ್ಗೆ ರಾಜಕಾರಣ ಮಾಡಬಾರದು. ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಪ್ರಧಾನಿ ಮೋದಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಏನು ರಾಮ ರಾಜ್ಯವಾಗಿತ್ತಾ?
ವಿರೋಧ ಪಕ್ಷದವರು ಶೇ.40ರಷ್ಟು ಪರ್ಸೆಂಟೇಜ್ ಸರ್ಕಾರ ಎನ್ನುವ ಆರೋಪವನ್ನು ದಾಖಲೆ ಸಮೇತ ಸಾಬೀತು ಮಾಡಲಿ ಎಂದು ಸವಾಲು ಹಾಕಿದ ಸಚಿವ ಈಶ್ವರಪ್ಪ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ರಾಜ್ಯ ಏನು ರಾಮ ರಾಜ್ಯವಾಗಿತ್ತಾ ಎಂದು ಪ್ರಶ್ನಿಸಿದರು.
ಗೃಹ ಖಾತೆ ನನ್ನ ಕೈಗೆ ಕೊಟ್ಟು ನೋಡಲಿ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆರಗ ಜ್ಞಾನೇಂದ್ರ ಅವರು ಯೋಗ್ಯರಿದ್ದಾರೆ. ವ್ಯವಸ್ಥಿತವಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಹಾಗಂತ ಯತ್ನಾಳ್ ಅವರು ಯೋಗ್ಯರಿಲ್ಲ ಅಂತ ಅಲ್ಲಾ. ಈ ಬಗ್ಗೆ ಪ್ರಧಾನಿ, ಮುಖ್ಯಮಂತ್ರಿ ಅವರು ಹೇಳುತ್ತಾರೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡೋದನ್ನ ಸಹಿಸಲ್ಲ: ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ