ಶಿವಮೊಗ್ಗ: ಮಾಜಿ ಸಿ.ಎಂ ಸಿದ್ದರಾಮಯ್ಯರಿಗೆ ಮಾಡುವುದಕ್ಕೆ ಕೆಲಸವಿಲ್ಲ, ಹಾಗಾಗಿ ಅವರ ಮಾತುಗಳಿಗೆ ತೂಕವಿಲ್ಲ ಎಂದು ಎಂ.ಎಲ್.ಸಿ ಆಯನೂರು ಮಂಜುನಾಥ್ ಕಿಡಿ ಕಾರಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯ ಆಡುವ ಭಾಷೆ ಭಾಷೆಯೇ ಅಲ್ಲ. ಆ ಮನುಷ್ಯನ ಭಾಷೆಗೆ ಯಾರೂ ತೂಕ ನೀಡಬಾರದು ಎಂದು ಏಕ ವಚನದಲ್ಲಿಯೇ ನಿಂದಿಸಿದ್ದಾರೆ. ರಾಜ್ಯದಲ್ಲಿ ಬಾಯಿಗೆ ಬಂದಂತೆ ಮಾತನಾಡಬಲ್ಲ ಏಕೈಕ ರಾಜಕಾರಣಿ ಎಂದರೆ ಅದು ಸಿದ್ಧರಾಮಯ್ಯ. ಅವರ ವಿರುದ್ಧ 62 ಕೇಸುಗಳು ಎಸಿಬಿಯಲ್ಲಿ ಬಾಕಿ ಇವೆ. ಅವರೇ ರಾಜೀನಾಮೆ ನೀಡಬೇಕಾಗಿದೆ. ಇಂತವರು ಅಮಿತ್ ಶಾ ರಾಜೀನಾಮೆ ಬಗ್ಗೆ ಮಾತನಾಡುತ್ತಾರೆ ಅಂತ ತಿರುಗೇಟು ನೀಡಿದ್ದಾರೆ.
ಎಸಿಬಿಯ ಹಲ್ಲುಗಳನ್ನು ಮುರಿದು ಉಗುರುಗಳನ್ನು ಮೊಂಡ ಮಾಡಿರುವ ಸಿದ್ದರಾಮಯ್ಯ ಯಾವುದೋ ವಿಡಿಯೋ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ಹಾಸ್ಯಾಸ್ಪದ. ತಮ್ಮ ಕೇಸುಗಳಿರುವ ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿಯನ್ನು ತಂದು ಲೋಕಾಯುಕ್ತವನ್ನು ರದ್ದು ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿದ್ದರಾಮಯ್ಯ ಮತ್ತೊಬ್ಬರ ಬಗ್ಗೆ ಆರೋಪ ಮಾಡುವ ನೈತಿಕತೆ ಇಲ್ಲ. ಸಿದ್ಧರಾಮಯ್ಯ ಅವರ ಮೇಲೆ ಎಸಿಬಿಯಲ್ಲಿ ಒಂದೇ ಒಂದು ಕೇಸು ಇಲ್ಲ ಎಂದು ಅವರು ಹೇಳಿದರೆ, ಶಿವಮೊಗ್ಗದ ಗೋಪಿ ಸರ್ಕಲ್ನಲ್ಲಿ ದೊಡ್ಡ ಹಾರ ಹಾಕಿ ಅವರನ್ನು ಸನ್ಮಾನಿಸುವೆ ಎಂದು ಆಯನೂರು ಮಂಜುನಾಥ್ ಟೀಕೆ ಮಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿಯೇ ಟೀಕಿಸಿರುವ ಆಯನೂರು ಮಂಜುನಾಥ್, ಆತನ ವ್ಯಾಕರಣದಲ್ಲಿ ಬಹು ವಚನವೇ ಇಲ್ಲ. ಆತ ಅತ್ಯಂತ ಸುಳ್ಳ, ದುರಂಹಕಾರಿ. ಭಾಷೆ ಮೇಲೆ ಹಿಡಿತವಿಲ್ಲದ ವ್ಯಕ್ತಿಯಾಗಿದ್ದು, ಬೇರೆಯವರಿಗೆ ವ್ಯಾಕರಣದ ಬಗ್ಗೆ ಪಾಠ ಮಾಡುತ್ತಾರೆ ಎಂದು ಲೇವಡಿ ಮಾಡಿದರು.