ಶಿವಮೊಗ್ಗ : ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆದವರು ಕೆಎಫ್‌ಡಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಲಸೀಕಾಕರಣ ನಿರೀಕ್ಷಿತ ಗುರಿ ತಲುಪುತ್ತಿಲ್ಲ. ಇದು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಡಿಸೆಂಬರ್‌ನಿಂದ ಜೂನ್‌ವರೆಗೆ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಅಥವಾ ಮಂಗನ ಕಾಯಿಲೆ ಬಿಟ್ಟು ಬಿಡದೇ ಕಾಡುತ್ತದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳ ನೂರಾರು ಜನರು ಪ್ರತಿ ವರ್ಷ ಇದರಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ.
2019ರಲ್ಲಿ ಕೆಎಫ್‌ಡಿ ಪ್ರಕರಣಗಳು ಉಲ್ಭಣಗೊಂಡು ಶಿವಮೊಗ್ಗ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ಕೆಎಫ್‌ಡಿ ವೈರಸ್ಗೆ ಕಡಿವಾಣ ಹಾಕಲು ಮುಂದಾದ ಆರೋಗ್ಯ ಇಲಾಖೆ ವ್ಯಾಕ್ಸಿನೇಷನ್ ನಡೆಸುತ್ತಿದೆ.
ಕೆಎಫ್‌ಡಿ ಲಸಿಕೆ ಪಡೆಯಲು ಹಿಂದೇಟು : ಪ್ರತಿವರ್ಷ ಸೆಪ್ಟೆಂಬರ್ ತಿಂಗಳಿನಿಂದಲೇ ಲಸಿಕಾಭಿಯಾನ ಆರಂಭಿಸುತ್ತಿದ್ದ ಆರೋಗ್ಯ ಇಲಾಖೆ ಡಿಸೆಂಬರ್ ಅಂತ್ಯದೊಳಗೆ ನಿಗದಿತ ಗುರಿ ತಲುಪುತ್ತಿತ್ತು. ಎರಡು ಡೋಸ್ ಕೆಎಫ್‌ಡಿ ಲಸಿಕೆ ಹಾಗೂ ಒಂದು ಬೂಸ್ಟರ್ ಡೋಸ್ ಅನ್ನು ನೀಡುವ ಪರಿಣಾಮ ಕೆಎಫ್‌ಡಿ ಬಾಧಿತ ಗ್ರಾಮಗಳ ಜನರು ಕೆಎಫ್‌ಡಿ ಸೋಂಕಿಗೆ ಒಳಗಾಗುತ್ತಿರಲಿಲ್ಲ. ಆದರೆ, ಈ ವರ್ಷ ಕೋವಿಡ್ ಲಸಿಕೆ ನೀಡುತ್ತಿರುವ ಪರಿಣಾಮ ಜನರು ಕೆಎಫ್‌ಡಿ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ, ಈ ಬಾರಿ ಶೇ.50ರಷ್ಟು ಕೂಡ ಗುರಿ ತಲುಪಿಲ್ಲ.
ಕೋವಿಡ್ ಲಸಿಕೆ ಪಡೆಯುತ್ತಿರುವ ಜನ : ಕೋವಿಡ್ ಲಸಿಕೆ ಪಡೆದವರಲ್ಲಿ ಮೈ-ಕೈ ನೋವು ಕಾಣಿಸುತ್ತದೆ. ಕೋವಿಡ್ ಲಸಿಕೆ ಪಡೆದ ಮೇಲೆ ಎರಡನೇ ಡೋಸ್ ಪಡೆಯಲೇಬೇಕು. ಕೆಎಫ್‌ಡಿ ಲಸಿಕೆ ಕೂಡ 2-3 ತಿಂಗಳ ಅಂತರದಲ್ಲಿ ಮೂರು ಡೋಸ್ಗಳನ್ನು ಪಡೆಯಬೇಕು. ಕೆಎಫ್‌ಡಿ ಲಸಿಕೆ ಪಡೆದವರಲ್ಲೂ ಉರಿ, ನೋವು ಕಾಣಿಸಿಕೊಳ್ಳುವುದು ಸಾಮಾನ್ಯ.
ಸರ್ಕಾರ ಕೋವಿಡ್ ಲಸಿಕೆ ಪಡೆಯಲು ಜಾಗೃತಿ ಮೂಡಿಸುತ್ತಿದೆ. ಗ್ರಾಮೀಣ ಭಾಗದಲ್ಲೀಗ ಹೆಚ್ಚೆಚ್ಚು ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕೆಎಫ್‌ಡಿ ಲಸಿಕೆ ಪಡೆಯಬೇಕಿದ್ದ ಜನರು ಕೋವಿಡ್ ಲಸಿಕೆ ಪಡೆಯುತ್ತಿದ್ದಾರೆ. ಕೆಎಫ್‌ಡಿ ಲಸಿಕೆ ಕಡೆ ಗಮನ ಹರಿಸುತ್ತಿಲ್ಲ. ಈ ಕಾರಣಕ್ಕೆ ಕೆಎಫ್‌ಡಿ ಲಸಿಕೆ ಗುರಿ ಮುಟ್ಟುತ್ತಿಲ್ಲ.
ಕೋವಿಡ್ ಲಸಿಕೆ ಪಡೆದ 14 ದಿನಗಳ ನಂತರ ಕೆಎಫ್‌ಡಿ ಲಸಿಕೆ ಹಾಕಿಸಿಕೊಳ್ಳಬಹುದು. ಯಾವುದೇ ಆರೋಗ್ಯ ತೊಂದರೆ ಕಾಣಿಸಿಕೊಳ್ಳುವುದಿಲ್ಲ ಎಂದು ತಜ್ಞರು ಮನವರಿಕೆ ಮಾಡುತ್ತಿದ್ದರೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಈ ಬಾರಿ ಜಿಲ್ಲೆಯ 1.95 ಲಕ್ಷ ಜನರಿಗೆ ಕೆಎಫ್‌ಡಿ ಲಸಿಕೆ ನೀಡುವ ಗುರಿ ಹೊಂದಿದ್ದ ಆರೋಗ್ಯ ಇಲಾಖೆ ಡಿಸೆಂಬರ್ ಅಂತ್ಯದವರೆಗೆ ಶೇ.47ರಷ್ಟು ಅಂದರೆ ಸುಮಾರು 95 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡಿದೆ.
ಇದನ್ನೂ ಓದಿ: 8 ವರ್ಷಗಳ ಹಿಂದಿನ ನಾಪತ್ತೆ ಕೇಸ್ಗೆ ಸುಳಿವು ನೀಡಿದ ಆ ಅನಾಮಿಕ ಕರೆ!
ಕೋವಿಡ್ ಲಸಿಕೆ ಜೊತೆ ಕೆಎಫ್‌ಡಿ ಲಸಿಕೆ ಕೂಡ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಆರೋಗ್ಯ ಇಲಾಖೆ ಜನವರಿ ಮತ್ತು ಫೆಬ್ರವರಿಯಲ್ಲಿ ಮತ್ತೆ ಕೆಎಫ್‌ಡಿ ಲಸಿಕಾಕರಣ ಚುರುಕುಗೊಳಿಸಲು ನಿರ್ಧರಿಸಿದ್ದು, ಜನರು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕಿದೆ.