ಶಿವಮೊಗ್ಗ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರ ಕಚೇರಿಯ ಮೇಲೆ ದೆಹಲಿ ಪೊಲೀಸರು ತನಿಖೆ ನಡೆಸಿರುವುದನ್ನು ಖಂಡಿಸಿ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲಾಯಿತು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರು ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವ ಜನರ ನೆರವಿಗೆ ನಿರಂತರವಾಗಿ ಧಾವಿಸುತ್ತಿದ್ದಾರೆ. ಅಗತ್ಯ ಇದ್ದವರಿಗೆ ಆಕ್ಸಿಜನ್ ದೊರೆಕಿಸಿಕೊಡುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಅವರ ಕೆಲಸಕ್ಕೆ ಬೆಂಬಲ ನೀಡುವ ಬದಲಾಗಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ದೆಹಲಿ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಶ್ರೀನಿವಾಸ್ ಅವರ ಕಚೇರಿಯ ಮೇಲೆ ದಾಳಿ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಶ್ರೀನಿವಾಸ್ ಅವರ ಶ್ರಮದ ಫಲದಿಂದ ಅನೇಕ ಕೊರೊನಾ ಸೋಂಕಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಕಾರ್ಯವೈಖರಿಯನ್ನು ಇಡೀ ದೇಶವೇ ಮೆಚ್ಚುತ್ತಿದೆ.
ದೇಶದ ಪ್ರಸಿದ್ಧ ನಟರು, ರಾಜಕಾರಣಿಗಳು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್ ಸುಂದ್ರೇಶ್, ಎನ್ಎಸ್‌ಯುಐ ಮುಖಂಡ ಚೇತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.