ಶಿವಮೊಗ್ಗ: ನಿನ್ನೆ ಜ್ವರ, ಕೆಮ್ಮು, ನೆಗಡಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದ 14 ಮಕ್ಕಳು ಇಂಜೆಕ್ಷನ್ ತೆಗೆದುಕೊಂಡ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮಕ್ಕಳಿಗೆ ಆಂಟಿಬಯಾಟಿಕ್ Ceftriaxone Injection ನೀಡಿದ್ದಕ್ಕೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಕ್ಕಳು ಅಸ್ವಸ್ಥಗೊಂಡ ಘಟನೆ ಸಾಗರದಲ್ಲಿ ನಡೆದಿತ್ತು.
ನಂತರ ಹೆಚ್ಚಿನ ತಪಾಸಣೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ನಾಲ್ಕು ಮಕ್ಕಳ್ನು ದಾಖಲಿಸಲಾಗಿತ್ತು. ಉಳಿದ ಮಕ್ಕಳಿಗೆ ಸಾಗರ ಉಪ ವಿಭಾಗಿಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದ್ದು, ಅಸ್ವಸ್ಥಗೊಂಡಿದ್ದ ಎಲ್ಲ ಮಕ್ಕಳ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡು ಬಂದಿದೆ. ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ. ಇದರಿಂದಾಗಿ ಪೋಷಕರಲ್ಲಿ ಮೂಡಿದ್ದ ಆತಂಕ ದೂರವಾಗಿದೆ.
ನಿನ್ನೆ ಸಾಗರ ಆಸ್ಪತ್ರೆಗೆ ಭೇಟಿ ನೀಡಿ, ಸಾಗರ ಶಾಸಕ ಹರತಾಳು ಹಾಲಪ್ಪ ಮಕ್ಕಳ ಆರೋಗ್ಯ ವಿಚಾರಿಸಿದ್ದರು. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ನಿರ್ದೇಶನ ನೀಡಿದ್ದರು. ಹೀಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ವೈದ್ಯರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ : ಸಾಗರ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ 14 ಮಕ್ಕಳು ಅಸ್ವಸ್ಥ: ನಾಲ್ವರು ಶಿವಮೊಗ್ಗಕ್ಕೆ ರವಾನೆ