ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಕ್ಷೀಣಿಸಿದೆ. ವಾಡಿಕೆಯಂತೆ ಈ ವೇಳೆಗಾಗಲೇ ಭಾಗಶಃ ಭರ್ತಿಯಾಗುತ್ತಿದ್ದ ಜಲಾಶಯಗಳು ಈ ಬಾರಿ ಇನ್ನೂ ಭರ್ತಿಯಾಗಿಲ್ಲ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ.
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷೆಯಂತೆ ಮಳೆಯಾಗಿಲ್ಲ. ಕಳೆದ ವರ್ಷ ಈ ವೇಳೆಗಾಗಲೇ ಮುಂಗಾರು ಅಬ್ಬರಿಸಿ ಸುರಿಯುತ್ತಿದ್ದರಿಂದ ಶಿವಮೊಗ್ಗದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ, ತುಂಗಾ, ಮಾಣಿ ಭಾಗಶಃ ಭರ್ತಿಯಾಗಿದ್ದವು. ಆದರೆ ಈ ಬಾರಿ ತುಂಗಾ ಜಲಾಶಯ ಹೊರತುಪಡಿಸಿ ಮತ್ಯಾವ ಜಲಾಶಯಗಳು ಕೂಡ ಭರ್ತಿಯಾಗಿಲ್ಲ. ಜುಲೈ ತಿಂಗಳಲ್ಲಿ ಶೇ. 37ರಷ್ಟು ಮಳೆ ಕೊರತೆ ಎದುರಾಗಿದೆ.
ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ವರುಣ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಇದೇ ರೀತಿ ಮುಂದುವರೆದರೆ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಗಣನೀಯ ಇಳಿಕೆಯಾಗುವ ಆತಂಕ ಎದುರಾಗಿದೆ. ಜೂನ್ 1ರಿಂದ ಇದುವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 1071 ಮಿ.ಮೀ. ಆಗಬೇಕಿತ್ತು. ಆದರೆ ಕೇವಲ 675 ಮಿ.ಮೀ ಮಳೆ ಬಿದ್ದಿದೆ. ಇನ್ನು ಶಿವಮೊಗ್ಗದಲ್ಲಿ ಶೇ. 30, ಭದ್ರಾವತಿಯಲ್ಲಿ ಶೇ. 34, ತೀರ್ಥಹಳ್ಳಿಯಲ್ಲಿ ಶೇ. 49, ಸಾಗರದಲ್ಲಿ ಶೇ. 13, ಹೊಸನಗರದಲ್ಲಿ ಶೇ. 27, ಶಿಕಾರಿಪುರದಲ್ಲಿ ಶೇ. 31 ಹಾಗೂ ಸೊರಬದಲ್ಲಿ ಶೇ. 47ರಷ್ಟು ಮಳೆ ಕೊರತೆ ಎದುರಾಗಿದೆ.
ಜಿಲ್ಲೆಯ ಅತಿ ಸಣ್ಣದಾದ ತುಂಗಾ ಡ್ಯಾಂ ಭರ್ತಿಯಾಗಿದ್ದು, ಜಲಾಶಯದ ಮೂಲಕ ನಾಲೆಗಳಿಗೆ 14 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಕಳೆದ ವರ್ಷ ಈ ವೇಳೆಗೆ ಐದು ಜಿಲ್ಲೆಗಳ ಜೀವನಾಡಿ ಎಂದೇ ಕರೆಸಿಕೊಳ್ಳುವ ಭದ್ರಾ ಜಲಾಶಯ 181 ಅಡಿ ತಲುಪಿತ್ತು. ಆದ್ರೆ ಈ ಬಾರಿ 139 ಅಡಿ ಮಾತ್ರ ತಲುಪಿದೆ. ಜಲಾಶಯಕ್ಕೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣವೂ 8 ಸಾವಿರ ಕ್ಯೂಸೆಕ್ಗೆ ಇಳಿದಿದೆ.
ರಾಜ್ಯದ ಅತಿ ದೊಡ್ಡ ಜಲಾಶಯವೆಂದು ಹೆಸರುವಾಸಿಯಾದ ಲಿಂಗನಮಕ್ಕಿ ಜಲಾಶಯ ಕೂಡ ಈ ಬಾರಿ ಭರ್ತಿಯಾಗುವುದು ಅನುಮಾನ. ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ಭಾಗದಲ್ಲಿ ಮಳೆ ಕ್ಷೀಣಿಸಿದ ಕಾರಣ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಇಳಿಕೆಯಾಗಿದೆ. ಆದರೆ ಕಳೆದ ವರ್ಷ ಈ ವೇಳೆಗಾಗಲೇ ಜಲಾಶಯದ ನೀರಿನ ಮಟ್ಟ 1802 ಅಡಿ ತಲುಪಿತ್ತು. ಈ ಬಾರಿ ಇನ್ನೂ ಕೇವಲ 1768.80 ಅಡಿ ತಲುಪಿದೆ.
ಮಳೆಯ ಅಭಾವದಿಂದ ಸರಿಯಾದ ಸಮಯಕ್ಕೆ ಬಿತ್ತಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಈದೀಗ ಬಿತ್ತನೆ ಮಾಡಿರುವ ಬೆಳಗಳನ್ನು ಉಳಿಸಲು ಸಹ ಪರದಾಡುವಂತಾಗಿದೆ.