ಶಿವಮೊಗ್ಗ: ವಿಶ್ವಶ್ವೇರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಆಡಳಿತ ಮಂಡಳಿ 105 ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಗುತ್ತಿಗೆ ಕಾರ್ಮಿಕ ನೌಕರರ ಸಂಘ ಪ್ರತಿಭಟನೆ ನಡೆಸುತ್ತಿದೆ.
ವಿಐಎಸ್ಎಲ್ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡುವ ಹುನ್ನಾರದ ಮೊದಲ ಹಂತವಾಗಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿ ಬಳಿಕ ಕಾರ್ಖಾನೆಗೆ ಬೀಗ ಹಾಕುವ ಯೋಚನೆಯಲ್ಲಿ ಆಡಳಿತ ಮಂಡಳಿ ಇದೆ. ಖಾಯಂ ನೌಕರರನ್ನು ಸೇಲ್ನ ಬೇರೆ ಕಾರ್ಖಾನೆಗೆ ವರ್ಗಾವಣೆ ಮಾಡಿದ್ರೆ, ಕಾರ್ಖಾನೆ ಮಾರಾಟ ಸುಲಭವಾಗುತ್ತದೆ ಎಂದು ಗುತ್ತಿಗೆ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ.
ಇದಕ್ಕೂ ಮೊದಲು ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ 20 ದಿನಗಳ ಕಾಲ ಕೆಲಸ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದರು. ಈಗ ಅಧಿಕಾರಿಗಳು ಮೌನವಹಿಸಿ ಕುಳಿತಿದ್ದಾರೆ. ಈಗಾಗಲೇ ಕಾರ್ಖಾನೆಯಲ್ಲಿ 105 ಜನರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ನೀಡಿ ಎಂದು ಗುತ್ತಿಗೆ ಕಾರ್ಮಿಕರು ಅರ್ನಿದಿಷ್ಟಾವಧಿ ಪ್ರತಿಭಟನೆಯನ್ನು ಪ್ರಾರಂಭ ಮಾಡಿದ್ದಾರೆ.