ಶಿವಮೊಗ್ಗ: ನಗರದಲ್ಲಿ ಯುವಕನಿಗೆ ಚಾಕು ಇರಿತ ಪ್ರಕರದ ಪ್ರಮುಖ ಆರೋಪಿಗೆ ಇಂದು ಬೆಳಗಿನ ಜಾವ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ವೇಳೆ ವಿನೋಬನಗರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಗುಂಡು ಹಾರಿಸಿದ್ದಾರೆ.
ಗುರುವಾರ ಎಂ.ಕೆ.ಕೆ ರಸ್ತೆಯ ತಿರುವುವಿನಲ್ಲಿ ಪ್ರೇಮ್ಸಿಂಗ್ಗೆ ಚಾಕುವಿನಿಂದ ಇರಿಯಲಾಗಿತ್ತು. ಆ ಬಳಿಕ ಪ್ರಮುಖ ಆರೋಪಿ ಮೊಹಮ್ಮದ್ ಜಬೀ ಅಲಿಯಾಸ್ ಚರ್ಬಿ (30) ನಾಪತ್ತೆಯಾಗಿದ್ದರು. ಇಂದು ಬೆಳಿಗ್ಗೆ ತೀರ್ಥಹಳ್ಳಿ ರಸ್ತೆಯ ಫಲಕ್ ಸಮುದಾಯ ಭವನದ ಬಳಿ ಆರೋಪಿ ಇರುವ ಮಾಹಿತಿ ಮೇರೆಗೆ ಪೊಲೀಸರು ತೆರಳಿದ್ದರು. ಆಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ವಿನೋನಗರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಎಂಬುವರ ತಮ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
(ಇದನ್ನೂ ಓದಿ: ಶಿವಮೊಗ್ಗ ಚಾಕು ಇರಿತ ಪ್ರಕರಣ.. ಇಬ್ಬರು ವಶಕ್ಕೆ: ಗೃಹ ಸಚಿವ ಆರಗ ಜ್ಞಾನೇಂದ್ರ)
ಆರೋಪಿ ಜಬೀ ಬಲಗಾಲಿಗೆ ಗುಂಡೇಟು ತಗುಲಿದ್ದು, ಸದ್ಯ ಆರೋಪಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಚಾಕು ಇರಿತ ಪ್ರಕರಣದಲ್ಲಿ ನದೀಮ್ ಹಾಗೂ ಅಬ್ದುಲ್ ರೆಹಮಾನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜೊತೆಗೆ ನಗರ ಮತ್ತು ಭದ್ರಾವತಿ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
(ಇದನ್ನೂ ಓದಿ: ಸಾವರ್ಕರ್ ಫ್ಲೆಕ್ಸ್ ತೆರವು ಗಲಾಟೆ: ಇಂದು ಶಿವಮೊಗ್ಗ, ಭದ್ರಾವತಿಯ ಶಾಲೆ ಕಾಲೇಜುಗಳಿಗೆ ರಜೆ)