ಶಿವಮೊಗ್ಗ: ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದ ಅರಣ್ಯಾಧಿಕಾರಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಅರಣ್ಯ ಹುತಾತ್ಮರ ದಿನಾಚರಣೆ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದರು. ಅರಣ್ಯ ಸಿಬ್ಬಂದಿ ಅರಣ್ಯ ರಕ್ಷಣೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅವರನ್ನು ಇದೊಂದು ದಿನ ಮಾತ್ರ ನೆನಪು ಮಾಡಿಕೊಳ್ಳದೆ, ಎಲ್ಲಾ ಕಾಲದಲ್ಲೂ ಸ್ಮರಿಸಬೇಕಿದೆ ಎಂದರು.
ಸರ್ಕಾರಿ ನೌಕರರಾದ ನಾವೆಲ್ಲಾ ಅರಣ್ಯ ಸೇವೆಯಲ್ಲಿ ಹುತಾತ್ಮರಾದ ಸಿಬ್ಬಂದಿಯ ಕುಟುಂಬ, ಸ್ನೇಹಿತರ ಜೊತೆ ಯಾವಾಗಲೂ ಇರುತ್ತೇವೆ. ಅರಣ್ಯ ಇಲಾಖೆಯ ಸಿಬ್ಬಂದಿ ವನ್ಯಜೀವಿಗಳ ರಕ್ಷಣೆಗಾಗಿಯೇ ಇದ್ದು, ಅವುಗಳನ್ನು ರಕ್ಷಣೆ ಮಾಡಲು ಹೋದಾಗ ಅವುಗಳು ರಕ್ಷಕರ ವಿರುದ್ಧವೇ ತಿರುಗಿಬೀಳುತ್ತವೆ. ಆದರೂ ಸಹ ಅದು ನಮ್ಮ ಕರ್ತವ್ಯ ಎಂದು ಭಾವಿಸಿ ಕಾರ್ಯನಿರ್ವಹಿಸುತ್ತಾರೆ. ಅರಣ್ಯ ಇಲಾಖೆಯವರ ದಕ್ಷತೆಯಿಂದ ಕೆಲಸ ಮಾಡಿದ ಪರಿಣಾಮ ಇಂದಿಗೂ ಸಹ ಅಮೂಲ್ಯ ಅರಣ್ಯ ಸಂಪತ್ತು ಉಳಿದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಹೂಗೂಚ್ಛ ಇಟ್ಟು ವಂದಿಸಿದರು. ಈ ವೇಳೆ ಎಸ್ಪಿ ಶಾಂತರಾಜು, ಅರಣ್ಯಾಧಿಕಾರಿ ಶಂಕರ್, ವನ್ಯಜೀವಿ ವಿಭಾಗದ ಡಿಎಫ್ಒ ನಾಗರಾಜ್, ಹುಲಿ- ಸಿಂಹಧಾಮದ ಮುಖ್ಯಾಧಿಕಾರಿ ಮುಕುಂದ್ ಚಂದ್ ರವರು ಹೂಗುಚ್ಛವಿಟ್ಟು ಗೌರವ ವಂದನೆ ಸಲ್ಲಿಸಿದರು. ನಂತರ ಹುತಾತ್ಮರಿಗೆ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು.