ಶಿವಮೊಗ್ಗ: ಪ್ಲಾಸ್ಟಿಕ್ ನಿಷೇಧ ಹಿನ್ನೆಲೆ ಅಂಗಡಿಯೊಂದರ ಮೇಲೆ ದಾಳಿ ಮಾಡಿದ ವೇಳೆ ಸಿಬ್ಬಂದಿ ಮೇಲೆ ಮಾಲೀಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಶಿವಮೊಗ್ಗ ಪಾಲಿಕೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಯಂತ್ರಿಸುವ ನಿಟ್ಟಿನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲು ಹೋಗಿದ್ದ ನಾಲ್ವರು ಪೌರಕಾರ್ಮಿಕರ ಮೇಲೆ ಅಂಗಡಿ ಮಾಲೀಕನೋರ್ವ ಹಲ್ಲೆ ನಡೆಸಿದ್ದಾನೆ.
ಮಹಾನಗರ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ತಂಡ ಪ್ಲಾಸ್ಟಿಕ್ ಬಳಸುವ ಅಂಗಡಿ ಹಾಗೂ ವಾಣಿಜ್ಯ ಕೇಂದ್ರಗಳ ಮೇಲೆ ಕಾರ್ಯಾಚರಣೆ ನಡೆಸಿತ್ತು. ನಗರದ ವಿನೋಬಾ ನಗರದಲ್ಲಿ ನಂದನ್ ಮೊಬೈಲ್ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ಮಾಡಿದಾಗ, ಅಂಗಡಿ ಮಾಲೀಕ ನಮ್ಮಲ್ಲಿ ಪ್ಲಾಸ್ಟಿಕ್ ಬ್ಯಾಗ್ಗಳಿಲ್ಲ ಎಂದು ಪೌರ ಕಾರ್ಮಿಕರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಸಿಬ್ಬಂದಿ ಮೇಲಿನ ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪಾಲಿಕೆ ಸಿಬ್ಬಂದ ಹಾಗೂ ಅಂಗಡಿ ಮಾಲೀಕನ ನಡುವೆ ಮಾತಿನ ಸಮರ ಜೋರಾಗಿ ಸಂದೇಶ್, ಶ್ರೀನಿವಾಸ್, ರವಿ ಹಾಗೂ ಭರತ್ ಮೇಲೆ ಅಂಗಡಿ ಮಾಲೀಕ ಸ್ಟೀಲ್ನಂತಹ ಕೋಲು ಹಿಡಿದ ಹಲ್ಲೆ ನಡೆಸಿದ್ದಾನೆ. ಪರಸ್ಪರರು ತಳಾಡಿದ ದೃಶ್ಯಾವಳಿಗಳು ಸಹ ಇದರಲ್ಲಿವೆ.
ಆರೋಗ್ಯ ಅಧಿಕಾರಿ ಹಾಗೂ ಪಾಲಿಕೆಯ ಪೌರ ಕಾರ್ಮಿಕರು ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.