ಶಿವಮೊಗ್ಗ: ಲೋಕಸಭಾ ಚುನಾವಣೆ ಮುಗಿದ ನಂತರ ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದು ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ ತಿಳಿಸಿದರು.
ಕಳೆದ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಶಿಕಾರಿಪುರ ತಾಲೂಕಿನಿಂದ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ವಿನಯ್ ರಾಜಾವತ್ ಕಣಕ್ಕಿಳಿದಿದ್ದರು. ನಾಮಪತ್ರ ಸಲ್ಲಿಸಲು ಬೆಂಗಳೂರಿನಿಂದ ಯಡಿಯೂರಪ್ಪ ಸ್ಟೈಲ್ನಲ್ಲೇ ಹೆಲಿಕಾಪ್ಟರ್ ಮೂಲಕ ಬಂದು, ಹವಾ ಕ್ರೀಯೆಟ್ ಮಾಡಿ ಚುನಾವಣೆಯಲ್ಲಿ ಸೋತಿದ್ದರು.
ಹೆಲಿಕಾಪ್ಟರ್ ಮೂಲಕವೇ ಮಾಡ್ತಾರಂತೆ ಚುನಾವಣೆ ಪ್ರಚಾರ...
ಈ ಬಾರಿಯು ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸುವುದಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯ ಸೋಲಿನಿಂದ ಬುದ್ದಿ ಕಲಿತಿದ್ದೇನೆ. ನಾನು ಯಾವುದೇ ಹಣ - ಹೆಂಡದ ಆಮಿಷ ಮಾಡದೇ ಚುನಾವಣೆಯನ್ನ ಎದುರಿಸಿದ್ದೇನೆ. ಹೀಗಾಗಿ ಯಡಿಯೂರಪ್ಪನವರಿಗೆ ತಿರುಗೇಟು ನೀಡಲು, ವಿಧಾನಸಭೆ ಚುನಾವಣೆಗೆ ಇನ್ನೂ ಸಮಯ ಇರುವ ಕಾರಣ ಲೋಕ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕಳೆದ ಬಾರಿ ಹೆಲಿಕಾಪ್ಟರ್ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದೆ. ಆದರೆ,ಈ ಬಾರಿ ಚುನಾವಣೆ ಪ್ರಚಾರವನ್ನ ಹೆಲಿಕಾಪ್ಟರ್ ಮೂಲಕವೇ ಮಾಡ್ತೀನಿ ಎಂದರು.
ಲೋಕಸಭೆ ಚುನಾವಣೆ ಮುಗಿದ ನಂತರ ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ ಎಂದು ಹೊಸ ಬಾಂಬ್ ಸಿಡಿಸಿದರು. ಯಾಕೆ ರಾಜೀನಾಮೆ ನೀಡುತ್ತಾರೆ ಎಂಬುದನ್ನ ನೀತಿ ಸಂಹಿತೆ ಮುಗಿದ ಮೇಲೆ ತಿಳಿಸುತ್ತೇನೆ. ನನ್ನ ಬಳಿ ಯಾವುದೇ ಕೈ ಬರಹದ ಡೈರಿ ಇಲ್ಲ. ಆದರೆ ಮಹತ್ವದ ಕೆಲವು ಸಾಕ್ಷಾಧಾರಗಳಿವೆ ಎನ್ನುವ ಮೂಲಕ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.