ಶಿವಮೊಗ್ಗ: 4,180 ಮಂದಿ ಮತದಾರರಿರುವ ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರದಲ್ಲಿ ನಾಲ್ವರು ಸ್ಫರ್ಧೆ ಮಾಡಿದ್ದು, ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿಯ ಏಳು ಸದಸ್ಯರು ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕದಿರಲು ನಿರ್ಧರಿಸಿದ್ದಾರೆ.
ಅನುದಾನ ಬಿಡುಗಡೆಗೆ ವಿಳಂಬ:
ನಾಲೂರು ಪಂಚಾಯತ್ಗೆ ರಾಜ್ಯ ಸರ್ಕಾರ ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಗೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಅನುದಾನವಿಲ್ಲದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳನ್ನು ಮಾಡಲಾಗುತ್ತಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
1.68 ಕೋಟಿ ರೂ. ಬಾಕಿ:
ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಮರಳು ಕ್ವಾರಿಗಳಿದ್ದು, ಇವುಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಲಾಭವಾಗುತ್ತಿದೆ. 3 ಕ್ವಾರಿಗಳಿಂದ ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ 84 ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕು. ಆದರೆ ಕಳೆದ ಎರಡು ವರ್ಷಗಳಿಂದ ಅನುದಾನ ಬಿಡುಗಡೆಯಾಗದೇ 1.68 ಕೋಟಿ ರೂ.ಬಾಕಿ ಉಳಿದುಕೊಂಡಿದೆ.
ರಸ್ತೆ ದುರಸ್ತಿಗೆ ಅನುದಾನದ ಕೊರತೆ:
ಮರಳು ಕ್ವಾರಿಗಳಿಗೆ ಓಡಾಡುವ ಲಾರಿಗಳಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿಗೆ ಗ್ರಾ.ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇದೆ. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಕ ಸೌಕರ್ಯಗಳ ಅಭಿವೃದ್ಧಿಗೂ ಅನುದಾನದ ಅಗತ್ಯವಿದೆ. ಆದರೆ ಎರಡು ವರ್ಷದಿಂದ 1.68 ಕೋಟಿ ರೂ. ಬಾಕಿ ಉಳಿದುಕೊಂಡಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ಜನರು ಗ್ರಾಮ ಪಂಚಾಯಿತಿ ಸದಸ್ಯರನ್ನೇ ಪ್ರಶ್ನಿಸುತ್ತಿರುವ ಕಾರಣ, ಇದೀಗ 7 ಜನ ಗ್ರಾ.ಪಂ ಸದಸ್ಯರು ಚುನಾವಣೆ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ.
ಒಟ್ಟಾರೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ಕಾವು ಪಡೆಯುತ್ತಿರುವ ನಡುವೆಯೇ ತೀರ್ಥಹಳ್ಳಿಯ ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ಚುನಾವಣೆ ಬಹಿಷ್ಕಾರ ಮಾಡಿದ್ದು, ರಾಜ್ಯ ಸರ್ಕಾರ ಇನ್ನಾದರೂ ಬಾಕಿ ಉಳಿದಿರುವ ಅನುದಾನ ಬಿಡುಗಡೆ ಮಾಡುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಬಿಬಿಎಂಪಿ ವಿರುದ್ಧದ ರೈತರ ಹೋರಾಟಕ್ಕೆ ಕೈ ಜೋಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ