ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ಎಲ್ಸಿ 31-ಕಡದಕಟ್ಟೆ, ಶಿವಮೊಗ್ಗದ ಎಲ್ಸಿ 49 ಸವಳಂಗ ರಸ್ತೆ, ವಿದ್ಯಾನಗರ ಹಾಗೂ ಎಲ್ಸಿ 54 ಕಾಶೀಪುರದಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಅಂಡರ್ ಪಾಸ್ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಸ್ಥಳಕ್ಕೆ ಸಂಸದ ಬಿ.ವೈ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿಗಳ ವಿವರ ಹೀಗಿದೆ..
- ರೈಲ್ವೆ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಮೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಅಂದಾಜು ವೆಚ್ಚ ರೂ. 116.31 ಕೋಟಿಗಳಾಗಿದ್ದು, ಇದರಲ್ಲಿ ಕಾಮಗಾರಿಯ ವೆಚ್ಚದ ಶೇ. 50 ರಷ್ಟು ಹಾಗೂ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಈ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ರೂ. 70.05 ಕೋಟಿ ಅನುದಾನ ಒದಗಿಸಲಾಗುತ್ತಿದೆ.
- ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ ರೂ. 8.61 ಕೋಟಿ ಹಾಗೂ ಭೂಸ್ವಾಧೀನಕ್ಕಾಗಿ ರೂ. 20.60 ಕೋಟಿ ಬಿಡುಗಡೆ ಮಾಡಲಾಗಿದೆ. ರೈಲ್ವೆ ಇಲಾಖೆ ಈ ಮೂರು ಕಾಮಗಾರಿಗಳನ್ನು ನಿರ್ಮಾಣ ಕಂಪನಿಗೆ (ಎಸ್.ಆರ್.ಸಿ. ಕಂಪನಿ) ಗುತ್ತಿಗೆ ನೀಡಿದೆ. ಈಗಾಗಲೇ ಮೂರು ಕಾಮಗಾರಿ ಭರದಿಂದ ಸಾಗುತ್ತಿವೆ. ಮುಂದಿನ 10-12 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
- ಜಿಲ್ಲಾಡಳಿತವು ಭೂಸ್ವಾಧೀನ ಹಾಗೂ ಯುಟಿಲಿಟಿ ಶಿಫ್ಟಿಂಗ್ ಗಾಗಿ ಅಗತ್ಯ ಕ್ರಮವನ್ನು ಕೈಗೊಂಡಿದೆ. ಶೀಘ್ರದಲ್ಲಿಯೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
- ಕಾಶಿಪುರ ಹಾಗೂ ಸವಳಂಗ ರಸ್ತೆ ಮೇಲ್ಸೇತುವೆಗಳಲ್ಲಿ ನಾಗರೀಕರಿಗೆ ನೆರವಾಗುವ ದೃಷ್ಟಿಯಿಂದ ಅಂಡರ್ ಪಾಸ್ನ್ನು ಸಹ ನಿರ್ಮಿಸಲು ನಿರ್ಧರಿಸಲಾಗಿದೆ.
- ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ 49 ರ ಬದಲಿಗೆ ರೂ. 60.76 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
- ಶಿವಮೊಗ್ಗ ನಗರದ ಕಾಶಿಪುರ ರೈಲ್ವೆ ಲೆವೆಲ್ ಕ್ರಾಸಿಂಗ್ 52ರ ಬದಲಿಗೆ ರೂ. 29.63 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಪಿ ಅಂಡ್ ಟಿ. ಕಾಲೋನಿಗೆ ಹೋಗುವ ರಸ್ತೆಯಲ್ಲಿನ ರೈಲ್ವೆ ಲೆವೆಲ್ ಕ್ರಾಸಿಂಗ್‌ಗೆ ರೈಲ್ವೆ ಕೆಳಸೇತುವೆ ನಿರ್ಮಾಣ.
- ಭದ್ರಾವತಿ ನಗರದ ಕಡದಕಟ್ಟೆ ಬಳಿ ಇರುವ ರೈಲ್ವೆ ಲೆವೆಲ್ ಕ್ರಾಸಿಂಗ್ 34ರ ಬದಲಿಗೆ ರೂ. 25.92 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ.
- ರಾಷ್ಟ್ರೀಯ ಹೆದ್ದಾರಿ 13 ರ ಕಿ.ಮಿ. 525.00 ರಲ್ಲಿ ರೈಲ್ವೆ ಸರಪಳಿ 60/950ರ ಶಿವಮೊಗ್ಗ ನಗರದ ವಿದ್ಯಾನಗರ ಬಳಿ ಎಲ್.ಸಿ.4 ಗೆ ಹೆದ್ದಾರಿ ರೂ. 43.90 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಇಲಾಖೆ ವತಿಯಿಂದ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
ಕೋಟೆಗಂಗೂರು ಕೋಚಿಂಗ್ ಡಿಪೋ: ಶಿವಮೊಗ್ಗ ಹೊರ ವಲಯ ಕೋಟೆ ಗಂಗೂರು ಗ್ರಾಮದ ಬಳಿ ರೈಲ್ವೆ ಇಲಾಖೆಗೆ ರೂ. 76 ಕೋಟಿ ಅಂದಾಜು ವೆಚ್ಚದಲ್ಲಿ ಕೋಚಿಂಗ್ ಡಿಪೋವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಈ ಕೋಚಿಂಗ್ ಡಿಪೋಗಾಗಿ ಸುಮಾರು 10 ಎಕರೆ ಖಾಸಗಿ ಭೂಸ್ವಾಧೀನದ ಅಗತ್ಯವಿದ್ದು, ಕೆ.ಐ.ಎ.ಡಿ.ಬಿ. ಸಂಸ್ಥೆ ಈ ಭೂಮಿಯನ್ನು 2 ತಿಂಗಳ ಒಳಗೆ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಿದೆ.
ರೈಲ್ವೆ ಇಲಾಖೆಯು ರೈಲ್ವೆ ಜಮೀನಿನಲ್ಲಿ ಈಗಾಗಲೇ ಅಗತ್ಯ ಪೂರ್ವ ಸಿದ್ಧತೆಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಕೋಟೆಗಂಗೂರಿನಲ್ಲಿ ರೂ. 21 ಕೋಟಿಗಳ ಅಂದಾಜು ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿರುವ ಟರ್ಮಿನಲ್ ಸ್ಟೇಷನ್ ಕಾಮಗಾರಿಯ ಟೆಂಡರ್ ಶೀಘ್ರ ಕರೆಯಲಾಗುತ್ತದೆ ಎಂದು ಸಂಸದರು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ರೈಲ್ವೆ ಅಧಿಕಾರಿಗಳಾದ ಶ್ರೀಧರಮೂರ್ತಿ, ಆಂಜನೇಯ ಪ್ರಸಾದ್, ಮುಖ್ಯ ಇಂಜಿನಿಯರ್ ಪ್ರಭಾಕರನ್, ವಿಜಯ್ ಭಾಸ್ಕರ್, ಶಿವಮೊಗ್ಗ ಮಹಾಪೌರರಾದ ಸುನೀತಾ ಅಣ್ಣಪ್ಪ, ಮಹಾನಗರ ಪಾಲಿಕೆಯ ಸದಸ್ಯರು, ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯಾದ್ಯಂತ ಪಿಯು, ಪದವಿ ಕಾಲೇಜು ಪುನಾರಂಭ: ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ