ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರದ ಸಾಯಿಬಾಬ ಮಂದಿರದಲ್ಲಿ (Sagara Saibaba Temple) ಶುಕ್ರವಾರದಂದು ಪ್ರಸಾದ ಸೇವಿಸಿದವರಲ್ಲಿ 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿವರ:
ಸಾಗರದ ವಿನೋಬನಗರದಲ್ಲಿನ ಸಾಯಿಬಾಬ ಮಂದಿರದಲ್ಲಿ ಮೊನ್ನೆ ರಾತ್ರಿ ಪ್ರಸಾದ ವಿನಿಯೋಗ ಮಾಡಲಾಗಿತ್ತು. ರಾತ್ರಿ ಹತ್ತಕ್ಕೂ ಹೆಚ್ಚು ಮಂದಿಗೆ ವಾಂತಿಯಾಗಿ ಆಸ್ಪತ್ರೆಗೆ ಬಂದು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ಆದರೆ ನಿನ್ನೆ ರಾತ್ರಿ ಮತ್ತೆ 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೆಲ್ಲರಿಗೂ ವಾಂತಿ, ಭೇದಿ ಕಾಣಿಸಿಕೊಂಡಿದೆ. ಸದ್ಯ ಎಲ್ಲರೂ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಇದನ್ನೂ ಓದಿ: ಮದುವೆಯಲ್ಲಿ ಊಟ.. 50ಕ್ಕೂ ಹೆಚ್ಚು ಜನ ಅಸ್ವಸ್ಥ..
ಜನರು ಅಸ್ವಸ್ಥರಾಗಲು ನಿಖರ ಕಾರಣ ಕಂಡುಹಿಡಿಯಲು ಆರೋಗ್ಯ ಇಲಾಖೆ ಮುಂದಾಗಿದೆ. ನೀರಿನ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಯಾರೂ ಕೂಡಾ ಹೆದರುವ ಅವಶ್ಯಕತೆ ಇಲ್ಲ ಎಂದು ಸಾಗರ ತಾಲೂಕು ವೈದ್ಯಾಧಿಕಾರಿ ಡಾ.ಮೋಹನ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಶಾಸಕ ಹರತಾಳು ಹಾಲಪ್ಪ ಆಸ್ಪತ್ರೆಗೆ ಭೇಟಿ:
ಸಾಗರ ಶಾಸಕ ಹರತಾಳು ಹಾಲಪ್ಪ (Sagar MLA Haratalu Halappa) ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು.