ಶಿವಮೊಗ್ಗ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2021ರ ಜನಗಣತಿ ನಡೆಸಲು ಬೇಕಾದ ಸಿದ್ಧತೆ ಕುರಿತು ಶಿವಮೊಗ್ಗದ ಎಲ್ಲಾ ಚಾರ್ಜ್ ಅಧಿಕಾರಿಗಳ ಸಭೆ ನಡೆಯಿತು.
ಎಡಿಸಿ, ಡಿಎಸ್ಒ, ಎಸಿ, ಮಹಾನಗರ ಪಾಲಿಕೆ ಆಯುಕ್ತರು, ತಹಶೀಲ್ದಾರರು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಈ ಸಭೆಯಲ್ಲಿದ್ದರು. ಜನಗಣತಿ ಕಾರ್ಯಕ್ಕಾಗಿ ಅಪರ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಜನಗಣತಿ ಅಧಿಕಾರಿಯಾಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳನ್ನು ಅಪರ ಜಿಲ್ಲಾ ಜನಗಣತಿ ಅಧಿಕಾರಿಯನ್ನಾಗಿ ಈ ವೇಳೆ ನೇಮಕ ಮಾಡಲಾಗಿದೆ.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇದೇ ಮೊದಲ ಬಾರಿಗೆ 2021ರ ಜನಗಣತಿಯು ಮೊಬೈಲ್ ಆ್ಯಪ್ನಲ್ಲಿ ನಡೆಸಲಾಗುತ್ತದೆ. ಅದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆಗಳನ್ನು ಎಲ್ಲರೂ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.