ಶಿವಮೊಗ್ಗ: ಹೊಸನಗರದ ಹೋಟೆಲ್ನಲ್ಲಿ ಕಟ್ಟಬೇಕಾಗಿರುವ 80 ಸಾವಿರ ರೂಪಾಯಿ ಬಿಲ್ ಕಟ್ಟುವಂತೆ ಕಾರ್ಗಲ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜಗದೀಶ್ ನಾಯ್ಕ ಅವರಿಗೆ ಸಾಗರ ಶಾಸಕ ಹರತಾಳು ಹಾಲಪ್ಪ ಖಡಕ್ ಸೂಚನೆ ನೀಡಿದ್ದಾರೆ.
ಸಾಗರ ತಾಲೂಕು ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಸುವಾಗ ಕಾರ್ಗಲ್ ಪಟ್ಟಣ ಪಂಚಾಯತ್ ವಿಷಯ ಚರ್ಚೆಗೆ ಬಂದಾಗ ಮುಖ್ಯಾಧಿಕಾರಿ ಜಗದೀಶ್ ನಾಯ್ಕ ಅವರು ವಿವರಣೆ ನೀಡಲು ಬಂದಾಗ, ಗರಂ ಆದ ಶಾಸಕರು, ಮೊದಲು ಹೊಸನಗರ ಹೋಟೆಲ್ಗೆ ಮೊದಲು 80 ಸಾವಿರ ರೂಪಾಯಿ ಬಿಲ್ ಕಟ್ಟಲು ನೀಡಲು ಸೂಚಿಸಿದರು.
'ಹೋಟೆಲ್ ಮಾಲೀಕರು ನನ್ನ ಬಳಿ ಬಂದು ಹೋಟೆಲ್ ಬಿಲ್ 80 ಸಾವಿರ ನೀಡದೆ ಹೋದ್ರೆ, ಕುಟುಂಬ ಸಮೇತ ವಿಷ ಕುಡಿಯುವುದಾಗಿ ತಿಳಿಸಿದ್ದಾರೆ. ಯಾಕ್ರಿ.. ತಿಂದ ಬಿಲ್ ಕೊಡಲು ಆಗೋದಿಲ್ವಾ?' ಎಂದು ಪ್ರಶ್ನಿಸಿದರು.
ಕಾರ್ಗಲ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾದ ಜಗದೀಶ್ ನಾಯ್ಕ ಅವರು ಹೊಸನಗರ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯಾಗಿದ್ದರು. ಆಗ ಪಟ್ಟಣ ಪಂಚಾಯತಿಯಲ್ಲಿ ನಡೆದ ಕಾರ್ಯಕ್ರಮಗಳಿಗೆ ಕಾಫಿ, ಟೀ, ಹಾಗೂ ಉಪಹಾರ ತಂದ ಬಿಲ್ 80 ಸಾವಿರ ರೂಪಾಯಿ ಆಗಿತ್ತು. ಈ ಬಿಲ್ ನೀಡಿ ಎಂದು ಹೋಟೆಲ್ ಮಾಲೀಕ ಸಾಕಷ್ಟು ಭಾರಿ ಕೇಳಿ ಸುಸ್ತಾಗಿದ್ದರು.
ಆದರೆ ಅಷ್ಟರಲ್ಲಿ ಜಗದೀಶ್ ನಾಯ್ಕ ಹೊಸನಗರದಿಂದ ಕಾರ್ಗಲ್ಗೆ ವರ್ಗಾವಣೆ ಆಗಿದ್ದರು. ಈ ವಿಚಾರದ ಕುರಿತು ಗರಂ ಆದ ಶಾಸಕರು ತಿಂದ ಬಿಲ್ ನೀಡಲು ಏನ್ ಆಗುತ್ತೆ? ಅಂತ ಖಾರವಾಗಿಯೇ ತಿಳಿಸಿದರು. ತಕ್ಷಣ ಬಿಲ್ ಪಾವತಿ ಮಾಡಿ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಕೆಡಿಪಿ ಸಭೆ ನಿಶಬ್ದವಾಗಿತ್ತು.
ಇದನ್ನೂ ಓದಿ: ಪೊಲೀಸರೊಂದಿಗೆ ರಂಪಾಟ ನಡೆಸಿದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್