ಶಿವಮೊಗ್ಗ: ಉಪ ಚುನಾವಣೆಯಲ್ಲಿ ನಾವು ಕವರ್ನಲ್ಲಿ ಹಾಕಿ ಹಣ ಹಂಚಿದ್ದೇೆವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪ ಮಾಡುತ್ತಿದ್ದಾರೆ. ಡಿಕೆಶಿ ಹೀಗೆ ಹೇಳಿದ್ದಾರೆ ಎಂದರೆ ಅವರೇ ನೇರವಾಗಿ ಹಣ ಹಂಚಿದ್ದಾರೆ ಎಂದರ್ಥ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾವು ಕದ್ದು ಮುಚ್ಚಿಕೊಟ್ಟರೆ, ಅವರು ನೇರವಾಗಿಯೇ ಹಂಚಿದ್ದಾರೆ ಎಂದರ್ಥವಾಗುತ್ತದೆ. ಈ ಬಗ್ಗೆ ಏನು ಉತ್ತರ ಕೊಡ್ತಾರೆ ಡಿ.ಕೆ. ಶಿವಕುಮಾರ್ ಎಂದು ಪ್ರಶ್ನಿಸಿದರು.
ಇವೆಲ್ಲಾ ತೋರಿಕೆಗೆ ಹೇಳುವ ಮಾತುಗಳು. ಎಲ್ಲಾ ರಾಜಕೀಯ ಪಕ್ಷಗಳು ಕೂಡ ಕೃಷ್ಣನ ತಂತ್ರಗಾರಿಕೆ ಮಾಡಿರುತ್ತವೆ. ನಾವು (ಬಿಜೆಪಿಯವರು) ಕೂಡ ತಂತ್ರಗಾರಿಕೆ ಮಾಡಿರುತ್ತೇವೆ. ಸುಮ್ಮನೆ ಅವರು ದುಡ್ಡು ಹಂಚಿರುತ್ತಾರೆ ಎಂದು ಹೇಳುವುದು ಸರಿಯಲ್ಲ ಎಂದರು.
ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಹಾಲಿ ಸಿಎಂ ಬೊಮ್ಮಾಯಿ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವಾಗುತ್ತಿದೆ. ಹಾನಗಲ್ ಮತ್ತು ಸಿಂದಗಿಯಲ್ಲಿ ನಮ್ಮ ಶಾಸಕರೇ ಇದ್ದವರು.
ಸಂಘಟನೆ ಮತ್ತು ಬೂತ್ ಮಟ್ಟದ ಕಾರ್ಯಕರ್ತರು ಬಹಳಷ್ಟು ಶ್ರಮಿಸಿದ್ದಾರೆ. ಪ್ರಪಂಚವೇ ಮೆಚ್ಚುವ ನಾಯಕ ಮೋದಿಯವರ ಕಾರ್ಯ ಶೈಲಿಯಿಂದಾಗಿ ಗೆಲ್ಲುತ್ತೇವೆ ಎಂದು ಸಚಿವ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕೋವಿಡ್ ಲಸಿಕೆಯನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಇದೇ ವೇಳೆ ಸಚಿವರು ಮನವಿ ಮಾಡಿದರು.
ಇದನ್ನೂ ಓದಿ: ಬಿಜೆಪಿಯವರು ಅಕ್ರಮ ಎಸಗುವ ವಿಡಿಯೋ ನಮ್ಮ ಬಳಿ ಇದೆ: ಡಿಕೆಶಿ ಆರೋಪ