ಶಿವಮೊಗ್ಗ: ಯೋಗೇಶ್ವರ್ ಅವರೇ ನಿಮಗೆ ಸಚಿವ ಸಂಪುಟದಲ್ಲಿ ಇರುವುದು ಸಮಾಧಾನ ಇಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೊರಗೆ ಹೋಗಿ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದ್ದಾರೆ.
ಓದಿ: ಯಡಿಯೂರಪ್ಪ ಸರ್ವ ಸಮ್ಮತ ನಾಯಕ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಕಟೀಲ್
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೈಕಮಾಂಡ್ ತಿಳಿಸಿದೆ. ಬಿಜೆಪಿಯಲ್ಲಿ ಎಲ್ಲಾ ಶಾಸಕರು, ಮಂತ್ರಿಗಳು ಕಲ್ಲು ಬಂಡೆ ರೀತಿಯಲ್ಲಿ ಇದ್ದೇವೆ. ನಮ್ಮನ್ನು ಯಾರೂ ಅಲುಗಾಡಿಸಲು ಆಗಲ್ಲ ಎಂದರು. ಸಿ.ಪಿ.ಯೋಗೇಶ್ವರ್ ಅವರು ದೆಹಲಿಗೆ ಹೋಗಿ ಬಂದ ಮೇಲೆ ಮತ್ತೆ ಮಾಧ್ಯಮಗಳ ಎದುರು ಬಂದಿದ್ದು ತಪ್ಪು. ಹೈಕಮಾಂಡ್ಗೆ ದೂರು ಕೊಟ್ಟು ಬಂದ ಮೇಲೆ ಹೈಕಮಾಂಡ್ ಗಮನಿಸುವವರೆಗೂ ಸುಮ್ಮನಿರಬೇಕಿತ್ತು. ಇವರ ವಿರುದ್ಧ ಯಾವ ಬಿಗಿ ಕ್ರಮ ತೆಗೆದುಕೊಳ್ಳಬೇಕೋ ಪಕ್ಷ ಅದನ್ನು ತೆಗೆದುಕೊಳ್ಳಲಿದೆ ಎಂದರು.
ನಮ್ಮ ಪಕ್ಷದಲ್ಲಿ ಸರ್ವಾಧಿಕಾರವಿಲ್ಲ. ನಮ್ಮಪಕ್ಷದ ನಾಯಕತ್ವದ ಬಗ್ಗೆ ಒಬ್ಬಿಬ್ಬರು ಮಾತನಾಡುತ್ತಿದ್ದಾರೆ ನಿಜ ಎಂದು ಪಕ್ಷದಲ್ಲಿನ ಅಸಮಾಧಾನದ ಬಗ್ಗೆ ಒಪ್ಪಿಕೊಂಡರು. ಪಕ್ಷದಲ್ಲಿ ಏನಾದರೂ ಸಮಸ್ಯೆ ಇದ್ದರೆ ತಿಳಿಸಲು ಅವಕಾಶ ಇದೆ. ದೆಹಲಿ ನಾಯಕರು ಈ ಬಗ್ಗೆ ಗಮನಿಸಿದ್ದಾರೆ. ಸಿಎಂ ಪುತ್ರನ ಹಸ್ತಕ್ಷೇಪದ ಬಗ್ಗೆ ಹಿಂದೆ ಯತ್ನಾಳ್ ಆರೋಪಿಸಿದ್ದು, ಈಗ ಯೋಗೇಶ್ವರ್ ಮಾತನಾಡುತ್ತಿದ್ದಾರೆ. ಇವರ ಬಗ್ಗೆ ಪಕ್ಷ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಸಂತೋಷ ಇದ್ದರೆ ಈ ಕ್ಯಾಬಿನೆಟ್ನಲ್ಲಿ ಇರಿ. ಇಲ್ಲವಾದರೆ ಹೈಕಮಾಂಡ್ ಕ್ರಮ ತೆಗೆದುಕೊಳ್ಳುವವರೆಗೆ ಸುಮ್ಮನಿರಿ. ಅವರು ಕ್ರಮ ತೆಗೆದುಕೊಂಡರೆ ನೀವು ಇರಿ, ಇಲ್ಲವಾದರೆ ಕಾಂಗ್ರೆಸ್ನಿಂದ 17 ಶಾಸಕರು ಹೊರ ಬಂದ ಹಾಗೆ ನೀವೂ ರಾಜೀನಾಮೆ ನೀಡಿ ಹೊರ ಹೋಗಿ ಎಂದರು.