ಶಿವಮೊಗ್ಗ: ರೈತರು, ಜನರು ನೆಮ್ಮದಿಯಿಂದ ಇರಬೇಕು ಎಂದು ಪ್ರಾರ್ಥಿಸಿ ಹೋಮ-ಹವನ ನಡೆಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಅವರು ಇಂದು ಶಂಕರ ಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಕುಟುಂಬದ ಸದಸ್ಯರೊಂದಿಗೆ ಹೋಮ-ಹವನ ನೆರವೇರಿಸಿದ್ದಾರೆ. ಈ ಹೋಮವನ್ನು ಚುನಾವಣೆಗಾಗಿ ಮಾಡಿಸಿಲ್ಲ. ಚುನಾವಣೆಗಳು ಬರ್ತಿರ್ತಾವೆ, ಹೋಗ್ತಿರ್ತಾವೆ. ಹಾಗಂತ ಹೋಮ ನಿಲ್ಲಿಸೋಕೆ ಆಗುತ್ತಾ? ಎಂದು ಪ್ರಶ್ನಿಸಿದ ಸಚಿವರು, ಎಲೆಕ್ಷನ್ಗೂ, ಹೋಮಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಷತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಭಗವಂತನ ಕೃಪೆ ಬಿಜೆಪಿ ಮೇಲೆ ಇದೆ. ಕನಿಷ್ಠ 16 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ನಾಳೆಯಿಂದ ತೀರ್ಥಹಳ್ಳಿ, ಹೊನ್ನಾಳ್ಳಿ, ಚೆನ್ನಗಿರಿ, ಸೊರಬಕ್ಕೆ ಹೋಗುತ್ತಿದ್ದೇನೆ. ನಮ್ಮ ಸಂಘಟಕರು ಹೇಗೆ ಹೇಳುತ್ತಾರೋ, ಹಾಗೆ ನಡೆದುಕೊಳ್ಳುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಮಟ್ಟದ ಜನರ ಬದುಕು ಸುಧಾರಣೆಯಾಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಬಗ್ಗೆ ಜನರ ಗಮನ ಸೆಳೆಯುವ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಗ್ರಾ.ಪಂ. ಸದಸ್ಯರು ಈ ಬಗ್ಗೆ ಪ್ರಯತ್ನ ನಡೆಸಬೇಕಿದೆ. ರಾಜ್ಯ ಹಾಗು ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಇದನ್ನು ಬಳಸಿಕೊಂಡು, ಜನರಿಗೆ ಯೋಜನೆ ತಲುಪಿಸುತ್ತೇವೆ. ರಾಜ್ಯ ವಿಧಾನಸಭೆಯಲ್ಲಿ ಪೂರ್ಣ ಬಹುಮತವಿದೆ. ಈ ಚುನಾವಣೆಯ ಮೂಲಕ ವಿಧಾನ ಪರಿಷತ್ನಲ್ಲಿಯೂ ಪೂರ್ಣ ಬಹುಮತ ಸಾಧಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಭವಿಷ್ಯ ನುಡಿದರು.
ಇದನ್ನೂ ಓದಿ: ಸಿದ್ದರಾಮಯ್ಯನವರ ಸೊಕ್ಕಿನ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ: ಮಾಜಿ ಸಿಎಂ ಬಿಎಸ್ವೈ