ಶಿವಮೊಗ್ಗ/ಬೆಂಗಳೂರು: ಸಚಿವ ಕೆ ಎಸ್ ಈಶ್ವರಪ್ಪ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ತಮ್ಮ ನಿವಾಸದಲ್ಲಿರುವ ಸಚಿವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಓದಿ: ಕೆ ಎಸ್ ಈಶ್ವರಪ್ಪ ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ : ಸಿಎಂ ಬೊಮ್ಮಾಯಿ
ಇಂದು ನಗರದಲ್ಲಿ ನಡೆಯುವ ಕನಕದಾಸ ಸೇವಾ ಟ್ರಸ್ಟ್ನಿಂದ ನಿರ್ಮಾಣವಾಗಿರುವ ಶುಭಶ್ರೀ ಸಮುದಾಯ ಭವನ ಲೋಕಾರ್ಪಣೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು. ಸಂಜೆ ವೇಳೆಗೆ ಸಿದ್ದಗಂಗಾ ಮಠಕ್ಕೆ ತೆರಳಿ ಸ್ವಾಮೀಜಿಗಳ ಆಶೀರ್ವಾದ ಪಡೆಸು ಬೆಂಗಳೂರಿಗೆ ತೆರಳಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದ ಬಳಿಕ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಸಂಜೆ ಬೆಂಗಳೂರಿಗೆ ಈಶ್ವರಪ್ಪ: ಇಂದು ಸಂಜೆ 4 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ಸಚಿವ ಕೆ.ಎಸ್ ಈಶ್ವರಪ್ಪ, ಬಳಿಕ ಸಿಎಂ ಬೊಮ್ಮಾಯಿ ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಸಂಜೆ 6.30ಕ್ಕೆ ಸಿಎಂ ಬೊಮ್ಮಾಯಿರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಹುಬ್ಬಳ್ಳಿಯಿಂದ ಇಂದು ಸಂಜೆ 6 ಗಂಟೆಗೆ ಸಿಎಂ ಬೊಮ್ಮಾಯಿ ಬೆಂಗಳೂರಿಗೆ ವಾಪಸ್ ಆಗಲಿದ್ದು, ಗೃಹ ಕಚೇರಿ ಕೃಷ್ಣದಲ್ಲಿ ಈಶ್ವರಪ್ಪರಿಂದ ರಾಜೀನಾಮೆ ಪತ್ರ ಸ್ವೀಕರಿಸಲಿದ್ದಾರೆ.
ರಾಜೀನಾಮೆ ಪತ್ರ ನೀಡಿದ ಬಳಿಕ ಈಶ್ವರಪ್ಪ ರಾತ್ರಿಯೇ ಪುನಃ ಶಿವಮೊಗ್ಗಕ್ಕೆ ತೆರಳಲಿದ್ದಾರೆ. ರಾತ್ರಿ 11 ಗಂಟೆಗೆ ರೈಲು ಮೂಲಕ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗಿದೆ.