ಶಿವಮೊಗ್ಗ: ಅರಣ್ಯ ಹಕ್ಕು ಕಾಯ್ದೆ, ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ವಿಲೇ ಮಾಡದೆ, ತಿರಸ್ಕೃತಗೊಳಿಸುತ್ತಿರುವ ಸರ್ಕಾರದ ವಿರುದ್ಧ ಸೊರಬ ತಾಲೂಕಿನಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸೊರಬ ಪಟ್ಟಣ್ಣದಲ್ಲಿರುವ ಶ್ರೀ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಮಧು ಬಂಗಾರಪ್ಪ, ಟ್ರ್ಯಾಕ್ಟರ್ನಲ್ಲಿ ಸಾಗುವಳಿದಾರರೊಂದಿಗೆ ತಾಲೂಕು ಕಚೇರಿವರೆಗೆ ಸಾಗಿದರು. ಮೆರವಣಿಗೆ ಉದ್ದಕ್ಕೂ ಪ್ರತಿಭಟನಾನಿರತ ರೈತರು, ಅರಣ್ಯ ಭೂಮಿ, ಬಗರ್ ಹುಕುಂ ಸಾಗುವಳಿದಾರರ ಅರ್ಜಿ ವಜಾಗೊಳಿಸಿ, ಭೂಮಿ ಕಸಿದುಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಮಧುಬಂಗಾರಪ್ಪ, 'ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುತ್ತೇವೆ. ಅರಣ್ಯ ಹಾಗೂ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಅನಿವಾರ್ಯವಾಗಿದೆ. ಭೂ ಹಕ್ಕು ವಂಚಿತರಾಗುವ ಭೀತಿ ಸಾಗುವಳಿದಾರರಿಗೆ ಎದುರಾಗಿದೆ' ಎಂದು ಹೇಳಿದರು.
'ರೈತರ ಪರವಾಗಿ ಹೋರಾಟ ಮಾಡಿದ್ದೇನೆ. ನಾನು ಶಾಸಕನಾದ ಅವಧಿಯಲ್ಲಿ ಸಾವಿರಾರು ರೈತರಿಗೆ ಹಕ್ಕುಪತ್ರ ನೀಡಿದ್ದೇನೆ ಹೊರತು ಮನೆ ಒಡೆಯುವ ಕೆಲಸ ಯಾವತ್ತೂ ಮಾಡಿಲ್ಲ. ಆದರೆ ಹಾಲಿ ಶಾಸಕರು ಹಿಂದೆ ನೀಡಿದ ಹಕ್ಕುಪತ್ರಗಳನ್ನು ವಜಾ ಮಾಡಿ ರೈತ ವಿರೋಧಿಯಾಗಿ ನಡೆದುಕೊಂಡಿದ್ದಾರೆ' ಎಂದು ಕುಮಾರ್ ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ 25 ಜನ ಸಂಸದರು ಸಂಸತ್ತಿನಲ್ಲಿ ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ನಡೆಸಿಲ್ಲ.ಇವರಿಗೆ ಪ್ರಧಾನಿ ಎದುರು ನಿಂತು ರೈತರ ಬಗ್ಗೆ ಮಾತನಾಡುವ ಗಂಡಸ್ತನ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ , ಕಾಂಗ್ರೆಸ್ ಮುಖಂಡರಾದ ಜಿ.ಡಿ ಮಂಜುನಾಥ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಣಪತಿ ಹುಲ್ತಿಕೊಪ್ಪ ಸೇರಿದಂತೆ ಹಲವರಿದ್ದರು.
ಹಿಜಾಬ್ ವಿವಾದ: ಹಿಜಾಬ್ ವಿಚಾರವಾಗಿ ಮಾತನಾಡಿದ ಮಾಜಿ ಶಾಸಕ ಮಧು ಬಂಗಾರಪ್ಪ, ಧಾರ್ಮಿಕವಾಗಿ ಹಿಜಾಬ್ ಧರಿಸಲು ಅವಕಾಶವಿದೆ. ನ್ಯಾಯಾಲಯದ ಆದೇಶಕ್ಕೆ ಕಾಯುತ್ತಿದ್ದೇವೆ. ಈ ಮೊದಲು ಸಹ ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದರು. ಆದೇ ರೀತಿ ಮುಂದುವರೆಯಲಿ. ವಿದ್ಯಾರ್ಥಿಗಳ ನಡುವೆ ಜಾತಿ, ಧರ್ಮದ ವಿಷ ಬೀಜ ಬಿತ್ತದಂತೆ ಮನವಿ ಮಾಡಿದರು.
ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ: ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆಯನ್ನು ಫೆಬ್ರವರಿ 19ರ ರಾತ್ರಿ 9 ಗಂಟೆವರೆಗೆ ವಿಧಿಸಲಾಗಿದೆ ಎಂದು ಡಾ.ಸೆಲ್ವಮಣಿ ತಿಳಿಸಿದ್ದಾರೆ. ಶಾಲಾ-ಕಾಲೇಜುಗಳ ಆವರಣದಿಂದ 200 ಮೀಟರ್ ಒಳಗಡೆ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.