ಶಿವಮೊಗ್ಗ: ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡುವ ಕುವೆಂಪು ವಿಶ್ವವಿದ್ಯಾಲಯ ಈಗ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದೆ.
ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕುವೆಂಪು ವಿಶ್ವವಿದ್ಯಾಲಯವು, ಕೆಎಸ್ಯುಆರ್ಎಫ್ ಬಿಡುಗಡೆಗೊಳಿಸಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ 3 ನೇ ಸ್ಥಾನ ಹಾಗೂ ಸರ್ಕಾರಿ ವಿವಿಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ವಿ.ವೀರಭದ್ರಪ್ಪ ತಿಳಿಸಿದ್ದಾರೆ.
ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಕಳೆದ ಮಂಗಳವಾರ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ರಾಜ್ಯ ವಿಶ್ವವಿದ್ಯಾಲಯಗಳ ಪೈಕಿ ಕುವೆಂಪು ವಿವಿಯು ಶ್ರೇಣೀಕರಣದಲ್ಲಿ 4 ಸ್ಟಾರ್ ಗಳಿಸಿದ್ದು, 10 ವರ್ಷ ಪೂರೈಸಿದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಒಂದು ಸಾವಿರಕ್ಕೆ 718 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದೆ. ಮೊದಲೆರೆಡು ಸ್ಥಾನಗಳನ್ನು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಕೆಎಲ್ಇ ವಿವಿಗಳು ಪಡೆದಿದೆ. ಆದರೆ ಸರ್ಕಾರಿ ಅನುದಾನಿತ ವಿವಿಗಳ ಪಟ್ಟಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನವನ್ನು ಪಡೆದು, ಕುವೆಂಪು ವಿವಿ ಗರಿಮೆ ತನ್ನ ಹೆಚ್ಚಿಸಿಕೊಂಡಿದೆ. ಶೈಕ್ಷಣಿಕ ವರ್ಷದ ಏಪ್ರಿಲ್ನಿಂದ ಮಾರ್ಚ್ ವರೆಗಿನ ಸಾಧನೆಯನ್ನು ಗುರುತಿಸಿ ರ್ಯಾಂಕಿಂಗ್ ನೀಡಲಾಗಿದ್ದು, ಇದಕ್ಕಾಗಿ ರಾಜ್ಯದ 62 ವಿಶ್ವವಿದ್ಯಾಲಯಗಳ ಸಮೀಕ್ಷೆ ಮಾಡಲಾಗಿತ್ತು.
ಇನ್ನು ಈ ಶ್ರೇಣೀಕರಣದಲ್ಲಿ ಸಂಶೋಧನೆ, ಆವಿಷ್ಕಾರ, ಬೋಧನೆ, ಮೂಲ ಸೌಕರ್ಯ ಹಾಗೂ ಸಾಮಾಜಿಕ ಪರಿಣಾಮಗಳೆಂಬ ಐದು ಮಾನದಂಡಗಳಿದ್ದು, ಸಂಶೋಧನಾ ಉತ್ಪಾದಕತೆ, ಪೇಟೆಂಟ್ಗಳು, ಅಧ್ಯಾಪಕರ ಉತ್ಕೃಷ್ಟತೆ ಹಾಗೂ ಮತ್ತಿತರ 27 ಅಂಶಗಳನ್ನು ಪರಿಗಣಿಸಿ ರ್ಯಾಂಕಿಂಗ್ ನೀಡಲಾಗುತ್ತದೆ. ಕುವೆಂಪು ವಿವಿಯು ಸಂಶೋಧನೆ ಮತ್ತು ಬೋಧನೆ ವಿಭಾಗಗಳಲ್ಲಿ ಐದಕ್ಕೆ ಐದು ಅಂಕಗಳನ್ನು ಗಳಿಸಿರುವುದು ವಿವಿಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ಕುಲಪತಿಗಳು ಹರ್ಷ ವ್ಯಕ್ತಪಡಿಸಿದರು.