ಶಿವಮೊಗ್ಗ: ಹುಣಸೋಡು ಸ್ಫೋಟ ಸಂಭವಿಸಿ 60 ದಿನಗಳಾಗಿದ್ದು, ತನಿಖೆಯು ತನ್ನ ಹಾದಿ ತಪ್ಪುತ್ತಿದೆ. ಹೀಗಾಗಿ, ಸ್ಫೋಟ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅಥವಾ ಸಿಬಿಐಗೆ ವಹಿಸಬೇಕು ಎಂದು ಕೆಪಿಸಿಸಿ ವಕ್ತಾರ ಕೆ.ಬಿ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.
ಜನವರಿ 21ರಂದು ಹುಣಸೋಡಿನ ಕುಲಕರ್ಣಿ ಮಾಲೀಕತ್ವದ ಜಮೀನಿನಲ್ಲಿ ಕ್ರಷರ್ ನಡೆಸುವ ಸ್ಥಳದಲ್ಲಿ ಸ್ಫೋಟಕ ತುಂಬಿದ ವಾಹನ ಸ್ಫೋಟಗೊಂಡು 6 ಜನ ಮೃತಪಟ್ಟಿದ್ದರು. ಘಟನೆಯ ಬಳಿಕ ಸುಧಾಕರ್, ನರಸಿಂಹ ಮತ್ತು ಮಮ್ತಾಜ್ ಅವರನ್ನು ಬಂಧಿಸಲಾಗಿತ್ತು. ನಂತರ ಸ್ಫೋಟಕ ವಸ್ತುಗಳನ್ನು ನೀಡಿದ ಅನಂತಪುರಂನ ಸಾಯಿ ಎಂಟರ್ರ್ಪ್ರೈಸ್ನ ಮಾಲೀಕ ಹಾಗೂ ಅವರ ಮಕ್ಕಳನ್ನು ಬಂಧಿಸಿದ್ದು ಬಿಟ್ಟರೆ, ಸ್ಥಳೀಯವಾಗಿ ಯಾರನ್ನು ಬಂಧಿಸಿಲ್ಲ. ಸ್ಥಳೀಯರನ್ನು ಬಂಧಿಸಿದರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಂಧಿತರನ್ನು ಬಿಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಪೊಲೀಸರು ಸ್ಥಳೀಯ ಮುಖಂಡರನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಿ ಮತ್ತೆ ವಾಪಸ್ ಕಳುಹಿಸಿದ್ದಾರೆ. ಇದರಿಂದಾಗಿ ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಬಿಡುತ್ತಿಲ್ಲ. ಮಾಧ್ಯಮದವರ ಪ್ರವೇಶಕ್ಕೆ ಸಹ ಅವಕಾಶ ನೀಡುತ್ತಿಲ್ಲ ಎಂದರು.
ಸ್ಫೋಟ ನಡೆದ ಸುತ್ತಮುತ್ತ ಪ್ರದೇಶದಲ್ಲಿ ಅನೇಕ ಕ್ವಾರಿಗಳಲ್ಲಿ ಅಕ್ರಮ ಬ್ಲಾಸ್ಟಿಂಗ್ ನಡೆಯುತ್ತಿದ್ದರು ಸಹ ಪೊಲೀಸರು, ಕಂದಾಯ ಅಧಿಕಾರಿಗಳು ಸುಮ್ಮನೆ ಇರುವಂತೆ ಸೂಚಿಸಿದ್ದಾರೆ. ಈ ಹಿಂದೆ ಖಾಸಗಿ ಜಮೀನನಲ್ಲಿ ಕಲ್ಲು ಗಣಿಗಾರಿಕೆಯನ್ನು ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಕಂದಾಯ ಅಧಿಕಾರಿಗಳು ಎಸಿ ಅವರಿಗೆ ಪತ್ರ ಬರೆದಿದ್ದರು. ಅದನ್ನೂ ಸಹ ಸಚಿವರು ತಡೆ ಹಿಡಿದಿದ್ದಾರೆ ಎಂದು ಪ್ರಸನ್ನ ಕುಮಾರ್ ದೂರಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡ ರಮೇಶ್ ಹೆಗಡೆ, ರಂಗನಾಥ್ ಹಾಜರಿದ್ದರು.