ಶಿವಮೊಗ್ಗ: ಆದಿತ್ಯ ಶ್ರೀವತ್ಸವ್ ಅವರ ಅಮೋಘ ಶತಕ (109*) ಹಾಗೂ ವೆಂಕಟೇಶ್ ಅಯ್ಯರ್ ಅರ್ಧಶತಕದ (80*) ನೆರವಿನಿಂದ ಮಧ್ಯಪ್ರದೇಶ ತಂಡ ಅಲ್ಪ ಮೊತ್ತಕ್ಕೆ ಕುಸಿಯವ ಭೀತಿಯಿಂದ ಪಾರಾಗಿದ್ದು, 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 311 ರನ್‌ಗಳಿಸಿದೆ.
ಮಧ್ಯಪ್ರದೇಶ ತಂಡ ಬುಧವಾರ ದಿನದ ಅಂತ್ಯಕ್ಕೆ 34 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 60 ರನ್‌ಗಳಿಸಿತ್ತು. ಇಂದು 3ನೇ ದಿನದಾಟ ಆರಂಭಿಸಿದ ಯಶ್ ದುಬೆ 45 (159 ಎಸೆತ) ರನ್ ಮತ್ತು ನಾಯಕ ಶುಭಂ ಶರ್ಮಾ 25 (73 ಎಸೆತ) ರನ್ ಗಳಿಸಿ ಉತ್ತಮ ಆಟವಾಡುತ್ತಿದ್ದರು. ತಂಡದ ಮೊತ್ತ 113 ಆಗಿದ್ದಾಗ ದಾಳಿಗೆ ಇಳಿದ ಸ್ಪಿನ್ನರ್ ಶ್ರೇಯಸ್ ಗೋಪಾಲ್, ಯಶ್ ದುಬೆಯನ್ನು ಎಲ್‌ಬಿ ಬಲೆಗೆ ಬೀಳಿಸುವ ಮೂಲಕ 63 ರನ್‌ಗಳ ಜೊತೆಯಾಟವನ್ನು ಮುರಿದರು.
ಬಳಿಕ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ತಂಡವನ್ನು ಪಾರು ಮಾಡಿದ ಆದಿತ್ಯ ಶ್ರೀವತ್ಸವ್ ಭರ್ಜರಿ ಶತಕ ಸಿಡಿಸಿದರು. 223 ಎಸೆತಗಳಲ್ಲಿ 15 ಬೌಂಡರಿ ಮೂಲಕ ಶತಕ ಸಿಡಿಸಿದ ಅವರು, ನಾಲ್ಕನೇ ದಿನದ ಆಟಕ್ಕೆ ಕ್ರೀಸ್ ಉಳಿಸಿಕೊಂಡಿದ್ದಾರೆ. ಇನ್ನೋರ್ವ ಆಟಗಾರ ವೆಂಕಟೇಶ್ ಅಯ್ಯರ್ 10 ಬೌಂಡರಿ, 1ಸಿಕ್ಸರ್ ನೆರವಿನೊಂದಿಗೆ 200 ಎಸೆತಗಳಲ್ಲಿ 80 ರನ್ ಗಳಿಸಿ ಆಟ ಕಾದಿರಿಸಿಕೊಂಡಿದ್ದಾರೆ. ಈ ಜೋಡಿ 135 ರನ್ ಕಲೆಹಾಕಿದೆ.
ಗೌತಮ್, ಶ್ರೇಯಸ್ ಕೈಚಳಕ: ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಕೃಷ್ಣಪ್ಪ ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಜೋಡಿ ಬೌಲಿಂಗ್‌ನಲ್ಲೂ ತಮ್ಮ ಕೈಚಳಕ ತೋರಿ ಕರ್ನಾಟಕ ತಂಡ ಮೇಲುಗೈ ಸಾಧಿಸಲು ಕಾರಣರಾದರು. ಗೌತಮ್, ಮಧ್ಯಪ್ರದೇಶ ತಂಡದ ನಾಯಕ ಶುಭಂ ಶರ್ಮಾ ಅವರನ್ನು ಔಟ್ ಮಾಡುವ ಮೂಲಕ ತಂಡ ಮೇಲುಗೈ ಸಾಧಿಸಲು ನೆರವಾದರು. ಕೆ.ಗೌತಮ್, ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಆದಿತ್ಯ, ಅಯ್ಯರ್‌ಗೆ ಜೀವದಾನ: ನಾಯಕ ಕರುಣ್ ನಾಯರ್, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಮತ್ತು ಗೌತಮ್ ಕೈಚೆಲ್ಲಿದ ಕ್ಯಾಚ್‌ಗಳು ಕರ್ನಾಟಕಕ್ಕೆ ದುಬಾರಿಯಾದವು. ತಂಡದ 57ನೇ ಓವರ್ನಲ್ಲಿ ಆದಿತ್ಯ ಶ್ರೀವತ್ಸವ್ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್‌ಗೆ ಕ್ಯಾಚ್ ನೀಡಿದ್ದರು. ಅಲ್ಲದೇ 96.5ನೇ ಓವರ್ನಲ್ಲಿ ಆದಿತ್ಯ ಮತ್ತೊಂದು ಕ್ಯಾಚ್ ನೀಡಿದ್ದರು. ಆದರೆ, ಸ್ಲಿಪ್ನಲ್ಲಿ ನಾಯಕ ಕರುಣ್ ನಾಯರ್ ಮತ್ತೊಂದು ಜೀವದಾನ ನೀಡಿದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಆದಿತ್ಯ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 112.3ನೇ ಓವರ್ನಲ್ಲಿ ಕೆ.ಗೌತಮ್ ಕ್ಯಾಚ್ ಬಿಟ್ಟರು.