ಶಿವಮೊಗ್ಗ : ದಾವಣಗೆರೆಯಲ್ಲಿ ನಡೆಸಿದ್ದು ಸಿದ್ದರಾಮೋತ್ಸವವಲ್ಲ, ಬದಲಿಗೆ ಚುನಾವಣೋತ್ಸವ. ಆ ಕಾರ್ಯಕ್ರಮಕ್ಕೆ ಬಂದ ಜನರೇ ಅವರಿಗೆ ಮಣ್ಣು ಮುಕ್ಕಿಸಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸರಿಯಾದ ಕ್ಷೇತ್ರವೇ ಇಲ್ಲ. ಇನ್ನು ಅವರು ಗೆಲ್ಲುವುದು ಎಲ್ಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಆಲಂಗಿಸಿಕೊಂಡ ವಿಚಾರವಾಗಿ, ಅದನ್ನೂ ಸಹ ಅವರ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಹೇಳಿಕೊಡಬೇಕಾಯಿತು. ಕೆಲಕಾಲ ಜೊತೆಗೆ ಓಡಾಡಿದ ಪ್ರೇಮಿಗಳು ಬೇರೆಯಾಗಿರ್ತಾರೆ. ಬಳಿಕ ಕುಟುಂಬದವರೇ ಬುದ್ಧಿ ಹೇಳಿ ಮದುವೆಗೆ ಒಪ್ಪಿಸಿ ತಬ್ಬಿಕೊಳ್ಳಿ ಎಂದು ಗದರುವಂತಿತ್ತು ಆ ದೃಶ್ಯ ಎಂದು ವ್ಯಂಗ್ಯವಾಡಿದರು.
ಅಂದು ವೇದಿಕೆ ಕಾರ್ಯಕ್ರಮದ ಮಟ್ಟಿಗಷ್ಟೇ ತಬ್ಬಿಕೊಂಡಿದ್ದಾರೆ. ವೇದಿಕೆಯಿಂದ ಕೆಳಗಿಳಿದ ಮೇಲೆ ಕೈಯಲ್ಲಿ ಏನು ತೆಗೆದುಕೊಂಡರೋ ಅವರಿಗೆ ಗೊತ್ತು. ಆ ಅಪ್ಪುಗೆ ಅಂದಿನ ನಿಮಿಷಕ್ಕೆ ಅಷ್ಟೇ. ಗುಂಪುಗಾರಿಕೆಯಲ್ಲಿ ನಾಯಕರು ಕಾಲ ಕಳೆಯುತ್ತಿದ್ದಾರೆ. ಇದೇ ಕಾಂಗ್ರೆಸ್ನ ಸ್ಥಿತಿ ಎಂದು ಈಶ್ವರಪ್ಪ ಟೀಕಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ : ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆಯುತ್ತಾ ಇದೆ. ಯಾರು ಕಾಂಗ್ರೆಸ್ ಪಕ್ಷಕ್ಕೆ ಛೀಮಾರಿ ಹಾಕಿದ್ರೋ. ಯಾರು ಇಂದಿರಾ ಗಾಂಧಿಯನ್ನು ಸರ್ವಾಧಿಕಾರಿ ಎಂದು ಹೇಳಿ ಘೋಷಣೆ ಕೂಗಿದ್ರೋ. ಯಾರು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ, ಶಿಕ್ಷೆ ಅನುಭವಿಸಿದ್ದರೋ ಅಂಥ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಜವಾಬ್ದಾರಿ ತಗೊಂಡು, ಜೈ ಅನ್ನುತ್ತಿದ್ದಾರೆ. ಈ ದುಸ್ಥಿತಿ ಕೆಲವರಿಗೆ ಬಂದಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರ : ವಿಸ್ತರಣೆ ಕುರಿತು ಯಾವುದೇ ಮಾಹಿತಿ ಇಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮಂತ್ರಿಯಾಗಿದ್ರೂ ಪಕ್ಷ ಸಂಘಟನೆಗೆ ಕೆಲಸ ಮಾಡ್ತೇನೆ. ಆಗದಿದ್ದರೂ ಪಕ್ಷದ ಕೆಲಸ ಮಾಡ್ತೇನೆ. ಮುಂಬರುವ ಚುನಾವಣೆಯಲ್ಲಿ ಬಹುಮತ ತರಲಿಕ್ಕೆ ಕೆಲಸ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ : ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಕೇವಲ ಗಾಸಿಪ್: ಕೆ.ಪಿ. ನಂಜುಂಡಿ