ಶಿವಮೊಗ್ಗ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಮಾಜಿ ಪಿಎಂ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿರುವುದನ್ನು ನೋಡಿದ್ರೆ, ಅವರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಆದರೆ, ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಲವು ಕಡೆ ಜೆಡಿಎಸ್ನವರು ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಶ್ವರಪ್ಪ ಒಂದೊಂದ್ಸಾರಿ ಸತ್ಯ ಹೇಳ್ತಾರೆ : ಸಿಎಂ ಬದಲಾವಣೆ ಕುರಿತು ಈಶ್ವರಪ್ಪ ಸತ್ಯವನ್ನೇ ಹೇಳಿದ್ದಾರೆ. ಈಶ್ವರಪ್ಪನವರನ್ನು ಮಂತ್ರಿ ಮಾಡಿರುವುದೇ ಬೊಮ್ಮಾಯಿ. ಆದರೆ, ಈಶ್ವರಪ್ಪನವರಿಗೆ ಬೊಮ್ಮಾಯಿ ಮೇಲೆ ನಂಬಿಕೆ ಇಲ್ಲ. ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕು, ಇಲ್ಲವೇ ಬೊಮ್ಮಾಯಿ ಅವರು ಈಶ್ವರಪ್ಪನವರನ್ನು ಕಿತ್ತು ಹಾಕಬೇಕು ಎಂದರು.
ಗೃಹ ಸಚಿವರ ವಿರುದ್ಧ ಅಸಮಾಧಾನ : ಗೃಹ ಸಚಿವರು ಪೊಲೀಸ್ ಇಲಾಖೆ ಮೇಲೆ ಬೇಸತ್ತು ಹಾಗೆ ಮಾತನಾಡಿರಬೇಕು. ಅವರು ಮಂತ್ರಿಯಾಗಿ ನಾಲ್ಕು ತಿಂಗಳು ಕಳೆದಿದೆ. ಆದರೆ, ಏನೂ ಬದಲಾವಣೆ ಆಗದ ಕಾರಣ ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೃಹ ಇಲಾಖೆಯಲ್ಲಿ ಭ್ರಷ್ಟಾಚಾರ ಕೊಳೆತು ನಾರುತ್ತಿದೆ ಎನ್ನುವುದು ಮನವರಿಕೆಯಾಗಿರಬೇಕು ಎಂದು ವ್ಯಂಗ್ಯವಾಗಿ ಮಾತನಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ. ಮಳೆಯಿಂದ ಹಾನಿಯಾಗಿರುವುದನ್ನೇ ಇನ್ನೂ ಸರ್ವೇ ಮಾಡಿಸಿಲ್ಲ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ರಾಜ್ಯದಲ್ಲಿ ಸುಮಾರು 6 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯುತ್ತಿದೆ : ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯುತ್ತಿದೆ. ಆಡಳಿತ ಪಕ್ಷ ಬಿಟ್ಟು ಎಲ್ಲಾರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಕಾಂಗ್ರೆಸ್ಗೆ ಬರುತ್ತಿದ್ದಾರೆ.
ಒಮಿಕ್ರಾನ್ ಹೆಚ್ಚಾಗಲು ರಾಜ್ಯ ಸರ್ಕಾರವೇ ಕಾರಣ, ಹೊರ ದೇಶದಿಂದ ಬಂದವರು ಇಲ್ಲಿ ಹೇಗೆ ಮಿಸ್ಸಿಂಗ್ ಆಗುತ್ತಾರೆ. ಏರ್ಪೋರ್ಟ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಇದೆಲ್ಲಾ ನಡೆಯುತ್ತಿದೆ. ಇದು ಲಂಚ ಹೊಡೆಯುವ ಸರ್ಕಾರ ಎಂದು ಟೀಕಿಸಿದರು.