ಶಿವಮೊಗ್ಗ: ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮರು ಸಂಘಟಿಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಜೆಡಿಎಸ್ ಪಕ್ಷದ ಸಮಿತಿಯನ್ನು ವಜಾಗೊಳಿಸಲಾಗಿದೆ.
ಹೊಸ ಸಮಿತಿ ರಚನೆ ಮಾಡುವ ಸಲುವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿಯವರು ನಾಲ್ಕೈದು ಜಿಲ್ಲೆಗಳಿಗೆ ಸೇರಿದಂತೆ ಒಂದು ವೀಕ್ಷಕರ ಸಮಿತಿಯನ್ನು ರಚನೆ ಮಾಡಿದ್ದಾರೆ. ಈ ಸಮಿತಿಯ ಸದಸ್ಯರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ, ಅಡಕ್ ಕಮಿಟಿಯನ್ನು ರಚನೆ ಮಾಡಲು ಜಿಲ್ಲೆಯ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ನಗರದ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಿದ ವೀಕ್ಷಕರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಜೆಡಿಎಸ್ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದರು.
ಈ ವೇಳೆ ಕಾರ್ಯಕರ್ತರು ತಮ್ಮ ಅಳಲು ತೋಡಿಕೊಂಡರು. ನಾಯಕರುಗಳು ಬೇರೆ ಪಕ್ಷದವರೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗ ಕಾರ್ಯಕರ್ತರ ಗತಿ ಏನು? ಎಂದು ಪ್ರಶ್ನೆ ಮಾಡಿದರು. ಈ ವೇಳೆ ಮಾಜಿ ಅಧ್ಯಕ್ಷರುಗಳಾದ ನಿರಂಜನ್ ಹಾಗೂ ಮಂಜುನಾಥ್ ಗೌಡರ ಕಾರ್ಯವೈಖರಿಯನ್ನು ಖಂಡಿಸಿದರು. ಅಲ್ಲದೆ ಚುನಾವಣೆಯಲ್ಲಿ ಸ್ಥಳೀಯವಾಗಿ ಆಯ್ಕೆ ಮಾಡುವವರನ್ನೇ ಅಭ್ಯರ್ಥಿಗಳಾಗಿ ಮಾಡಬೇಕು. ಮಾಜಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಅವರನ್ನೇ ಪುನಃ ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ವೀಕ್ಷಕರಾಗಿ ಬಿ.ಬಿ.ನಿಂಗಯ್ಯ, ಮಾಜಿ ಶಾಸಕಿ ಶಾರದ ಪೂರ್ಯನಾಯ್ಕ, ಎಂ.ಶ್ರೀಕಾಂತ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.