ಶಿವಮೊಗ್ಗ: ಮೋದಿ ಸರ್ಕಾರದ 7 ವರ್ಷದ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಏರ್ಪಡಿಸಿದ್ದ ಜನಾಶೀರ್ವಾದ ಯಾತ್ರೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕತೆಯಲ್ಲಿ ದೇಶ ಸ್ವಾವಲಂಬಿಯಾಗಿದೆ. ಕೃಷಿ ಉತ್ಪಾದನೆಯಲ್ಲಿ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಭಾರತ ಏರಿಕೆ ಕಂಡಿದ್ದು ಎಂದರು.
ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಅವರ ಕಾಲದಲ್ಲಿ ನೂರು ರೂಪಾಯಿ ಯೋಜನೆಯಲ್ಲಿ ಕೇವಲ 15 ರೂಪಾಯಿ ಜನರಿಗೆ ಸಿಗುತ್ತಿತ್ತು. ಆದರೆ, ಮೋದಿ ಜನ್ ಧನ್ ಯೋಜನೆಯಡಿ ಎಲ್ಲರಿಗೂ ಬ್ಯಾಂಕ್ ಖಾತೆ ತೆರೆದು ಅವರ ಖಾತೆಗೆ ನೇರವಾಗಿ ಯೋಜನೆಗಳ ಹಣವನ್ನು ವರ್ಗಾಯಿಸಿರುವುದರಿಂದ ಶೇಕಡಾ ನೂರರಷ್ಟು ಹಣ ಫಲಾನುಭವಿಗಳಿಗೆ ತಲುಪುತ್ತಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 7 ವರ್ಷದ ಯೋಜನೆಗಳು ಮತ್ತು ಹಿಂದಿನ ಸರ್ಕಾರದ 60 ವರ್ಷದ ಯೋಜನೆಗಳನ್ನು ತುಲನೆ ಮಾಡಿ ಅಭಿವೃದ್ಧಿಯ ವೇಗವನ್ನು ನೋಡಿದಾಗ ಮೋದಿ ಸರ್ಕಾರದ ಸಾಧನೆ ಅರಿವಾಗುತ್ತದೆ.
ಹೊಸ ಐಡಿಯಾಲಜಿ, ಯೋಜನೆಗಳ ಜಾರಿ ಬದ್ಧತೆ, ಸಮರ್ಪಣೆ, ಸಾರ್ವಜನಿಕ ಸೇವೆ, ಸಾರ್ವಜನಿಕ ಸಂಪರ್ಕ, ಕೌಶಾಲ್ಯಾಭಿವೃದ್ಧಿ, ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ, ಆತ್ಮನಿರ್ಭರ್ ಯೋಜನೆಯಡಿ ಸ್ವಾವಲಂಬನೆಗಾಗಿ ವಿಶೇಷ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ.
ಈ ಬಗ್ಗೆ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಜನಾಶೀರ್ವಾದವನ್ನು ಮತ್ತೆ ಪಡೆಯುವ ಉದ್ದೇಶದಿಂದ ಪ್ರಧಾನಿಯವರು ಎಲ್ಲಾ ಸಚಿವರನ್ನು ತಾವು ಆಯ್ಕೆಯಾದ ಕ್ಷೇತ್ರಗಳಿಗೆ ಕಳಿಸಿದ್ದಾರೆ ಎಂದು ರಾಜೀವ್ ಶಂದ್ರಶೇಖರ್ ಸ್ಪಷ್ಟನೆ ನೀಡಿದರು.
ನಾಮಕಾವಸ್ತೆಗೆ ಮಂತ್ರಿಯಾಗಬಾರದು- ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಾಮಕಾವಸ್ತೆಗೆ ಮಂತ್ರಿಯಾಗಬಾರದು. ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎನ್ನುವ ದೃಷ್ಠಿಯಿಂದ ಪ್ರಧಾನಿಯವರು ಈ ಜನಾಶೀರ್ವಾದ ಯಾತ್ರೆಗೆ ಸೂಚನೆ ನೀಡಿದ್ದಾರೆ. ತಳಮಟ್ಟದಲ್ಲಿ ದೇಶದ ಜನರ ಅನಿಸಿಕೆ ಮತ್ತು ಅಭಿಪ್ರಾಯ ತಿಳಿಯಲು ಕೇಂದ್ರ ಸರ್ಕಾರದ ವಿನೂತನ ಕಾರ್ಯಕ್ರಮ ಇದಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವದ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದವು. ಆದರೆ, ಈಗ ಮೋದಿ ಸರ್ಕಾರ ಬಂದ ಬಳಿಕ ಎಲ್ಲಾ ದೇಶಗಳು ಭಾರತವನ್ನು ಬೆಂಬಲಿಸುತ್ತಿದ್ದು, ಪಾಕಿಸ್ತಾನವನ್ನು ಒಬ್ಬಂಟಿಯಾಗಿಸಿದೆ ಎಂದು ಅಭಿಪ್ರಾಯಪಟ್ಟರು.
'ಬೂತ್ ಮಟ್ಟದಲ್ಲಿ ಬಿಜೆಪಿ ಈಗಲೂ ಶಕ್ತಿಶಾಲಿ..'
2024ರಲ್ಲೂ ತಮ್ಮ ಸಾಧನೆಯನ್ನು ಜನರ ಬಳಿಗೆ ಕೊಂಡೊಯ್ದು, ಮತ್ತೊಮ್ಮೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬರಬೇಕೆನ್ನುವ ಕಾರಣಕ್ಕಾಗಿ ಈ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಾಗಿದೆ. ರಾಜ್ಯದಲ್ಲೂ ಕೂಡ ನೂತನ ಶಕ್ತಿ ಶಾಲಿ ಸಂಪುಟ ರಚನೆಯಾಗಿದ್ದು, ಬೂತ್ ಮಟ್ಟದಲ್ಲಿ ಬಿಜೆಪಿ ಶಕ್ತಿಶಾಲಿಯಾಗಿ ಸಂಘಟನೆಯಾಗಿದೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ , ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಆಯನೂರು ಮಂಜುನಾಥ್, ಕುಮಾರ್ ಬಂಗಾರಪ್ಪ, ಎಸ್. ರುದ್ರೇಗೌಡ, ಕೆ.ಬಿ. ಅಶೋಕ್ ನಾಯ್ಕ್ ಭಾರತಿ ಶೆಟ್ಟಿ, ಸಂಜೀವ ಮಠಂದೂರು, ಮಾಜಿ ಶಾಸಕರಾದ ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ಧರಾಮಣ್ಣ, ಕೆ.ಜಿ. ಕುಮಾರಸ್ವಾಮಿ, ಪ್ರಮುಖರಾದ ಡಿ.ಎಸ್. ಅರುಣ್, ಜ್ಯೋತಿ ಪ್ರಕಾಶ್, ಎಸ್. ದತ್ತಾತ್ರಿ, ಪವಿತ್ರಾ ರಾಮಯ್ಯ, ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: ಟೆಕ್ಸ್‌ಟೈಲ್ ಅಂಗಡಿ ಮಾಲೀಕನ ಗುಂಡಿಟ್ಟು ಹತ್ಯೆ: ಪ್ರತೀಕಾರದ ಕೊಲೆ?