ಶಿವಮೊಗ್ಗ: ದೇಶ ಬದಲಾಗುತ್ತಿದೆ, ಭಾರತದ ಶಕ್ತಿ ಹೆಚ್ಚುತ್ತಿದೆ ಎಂದು ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಹೇಳಿದರು.
ಜಯಪ್ರಕಾಶ್ ನಾರಾಯಣ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆಯಾದ ಭಾರತ ಇದೀಗ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿದೆ. ಜಗತ್ತಿನ ಸಾಧನೆಯ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಅದರ ವೈಭವ ಮರುಕರುಳಿಸಿದೆ. ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲ ವಿಭಾಗಗಳಲ್ಲಿಯೂ ದೃಷ್ಟಿಕೋನ ಬದಲಾಗಿದೆ. ಭವ್ಯ ಭಾರತವಾಗಿ ಹೊರಹೊಮ್ಮಿದೆ ಎಂದರು.
ಜಯಪ್ರಕಾಶ್ ನಾರಾಯಣ್ ಹೋರಾಟಗಾರ. ಬ್ರಿಟಿಷರ ವಿರುದ್ದ, ತುರ್ತು ಪರಿಸ್ಥಿತಿ ವಿರುದ್ದ ಹೋರಾಟ ಮಾಡಿದವರು. ಆಡಳಿತ ತಪ್ಪುದಾರಿ ಹಿಡಿದರೆ ಅವರು ಸಹಿಸುತ್ತಿರಲಿಲ್ಲ. ಅವರ ಮಾರ್ಗದರ್ಶನ ನಮ್ಮೆಲ್ಲಿರಿಗೂ ಇಂದು ಸ್ಪೂರ್ತಿಯಾಗಿದೆ. ಮೇಲಾಧಿಕಾರಿಗಳ ಸರ್ವಾಧಿಕಾರಿ ಧೋರಣೆಯನ್ನು ಅವರೆಂದು ಸಹಿಸುತ್ತಿರಲಿಲ್ಲ. ಗಾಂಧೀಜಿಯವರ ಹಾದಿಯಲ್ಲೇ ನಡೆದ ಅವರು, ಹೋರಾಟದ ಮನೋಭಾವ ಬೆಳೆಸಿಕೊಂಡವರು. ಅವರು ನಿಜವಾದ ಅರ್ಥದಲ್ಲಿ ಭಾರತದ ಜನನಾಯಕ, ಅಪ್ಪಟ ದೇಶಪ್ರೇಮಿ. ವಿದ್ಯಾರ್ಥಿಗಳು ಅವರ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿ ಸಂಘಗಳು ಸದಾ ಕ್ರಿಯಾಶೀಲತೆಯಿಂದ ಇರಬೇಕು. ಮೌಲ್ಯಯುತ ಕಾರ್ಯಕ್ರಮಗಳನ್ನು ನಡೆಸಬೇಕು. ಸಾಧನೆಗೆ ಪ್ರೇರಣೆಯಾಗುವಂತೆ ನಡೆದುಕೊಳ್ಳಬೇಕು. ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು.