ಶಿವಮೊಗ್ಗ : ಹುಣಸೋಡು ಗ್ರಾಮದ ಕ್ರಷರ್ ಬಳಿ ವಾಹನವೊಂದು ಸ್ಪೋಟಗೊಂಡ ನಂತರ ಅಡಳಿತ ಪಕ್ಷ ಅದನ್ನು ಸಾವರಿಸಿಕೊಂಡು ಹೋಗುವ ಯತ್ನ ಮಾಡುತ್ತಿದ್ದರೆ, ಇದನ್ನೇ ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಂಡು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಿವೆ.
ಓದಿ: ಹುಣಸೋಡು ಸ್ಫೋಟದ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಿ: ಬೇಳೂರು ಗೋಪಾಲಕೃಷ್ಣ
ಕ್ರಷರ್ಗಳ ಬಗ್ಗೆ ಆಡಳಿತ ಪಕ್ಷ ಚಕಾರ ಎತ್ತುವುದಿಲ್ಲ: ಕ್ರಷರ್‌ನಲ್ಲಿ ಸೃಷ್ಟಿಯಾಗುವ ಎಲ್ಲಾವು ಅಭಿವೃದ್ದಿ ಕಾರ್ಯಕ್ಕೆ ಬೇಕಾಗಿವೆ. ಇದರಿಂದ ಆಡಳಿತ ಪಕ್ಷಗಳು ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಕಾರಣ ತಮ್ಮ ಅವಧಿಯ ಅಭಿವೃದ್ದಿ ಕಾರ್ಯಕ್ಕೆ ಎಲ್ಲಿ ಬ್ರೇಕ್ ಬೀಳುತ್ತವೆ ಎಂದು ಇದರ ಬಗ್ಗೆ ಮಾತನಾಡುವುದಿಲ್ಲ.
ಆಡಳಿತ ಪಕ್ಷ ಮರಳು ಸೇರಿದಂತೆ ಜಲ್ಲಿ, ಈಗ ಎಂ ಸ್ಯಾಂಡ್ನ ಕುರಿತು ಹೆಚ್ಚು ಒಲವನ್ನು ವ್ಯಕ್ತಪಡಿಸುತ್ತಿದೆ. ಇದನ್ನು ಕೆಲ ರಾಜಕೀಯ ಪಕ್ಷದ ಮುಖಂಡರು ತಮ್ಮ ದಂಧೆಯನ್ನಾಗಿಸಿ ಕೊಂಡಿದ್ದಾರೆ. ಮೊದಲು ಕ್ರಷರ್ ಎಂದು ಅನುಮತಿ ಪಡೆದು ನಂತರ ಅಲ್ಲಿಯೇ ಕಲ್ಲು ಕ್ವಾರಿ ಪ್ರಾರಂಭ ಮಾಡುತ್ತಾರೆ.
ಕ್ರಷರ್ ಸಕ್ರಮ-ಕ್ವಾರಿ ಅಕ್ರಮ : ಶಿವಮೊಗ್ಗ ಜಿಲ್ಲಾದ್ಯಾಂತ ಇರುವ 96 ಕ್ರಷರ್‌ಗಳು ಸಕ್ರಮವಾಗಿವೆ. ಕ್ರಷರ್‌ಗಳನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅನುಮತಿ ನೀಡಲಾಗುತ್ತದೆ. ಕ್ರಷರ್‌ಗೆ ಅನುಮತಿ ನೀಡುವ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ, ವಾಯು ಮಾಲಿನ್ಯ ಇಲಾಖೆ ಹಾಗೂ ಮೆಸ್ಕಾಂ ನಿರ್ದೇಶಕರು ಇರುತ್ತಾರೆ. ಕ್ರಷರ್ ನಡೆಸುವವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಬೇಕಿದೆ. ಇವರು ಜಿಲ್ಲಾಧಿಕಾರಿಗಳ ಸಮಿತಿಯ ಮುಂದೆ ತಂದು ಅನುಮತಿ ಪಡೆಯಬೇಕಾಗುತ್ತದೆ.
ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಅಕ್ರಮ ಗಣಿಗಾರಿಕೆ : ಬಹಳ ಹಿಂದಿನಿಂದಲೂ ಸಹ ಕಲ್ಲು ಗಣಿಗಾರಿಕೆ ನಡೆದುಕೊಂಡು ಬರುತ್ತಿದೆ. ಇದರಲ್ಲಿ ಹಲವು ಸಕ್ರಮವಾಗಿದ್ರೆ, ಬಹುತೇಕ ಅಕ್ರಮವಾಗಿವೆ. ಆದರೆ,ಮೊನ್ನೆ ಸ್ಫೋಟಗೊಂಡ ಭಾಗದಲ್ಲಿ ಇರುವ ಹತ್ತಾರು ಕಲ್ಲು ಕ್ವಾರಿಗಳು ಅಕ್ರಮವಾಗಿವೆ. ಹುಣಸೋಡು, ಗಜ್ಜೆನಹಳ್ಳಿ, ಕಲ್ಲುಗಂಗೂರು, ಸೋಮಿನಕೊಪ್ಪ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತದೆ. ಆದರೆ, ಅಭಯಾರಣ್ಯ ಪ್ರದೇಶ ಘೋಷಣೆಯಾದ ನಂತರ ಶಿವಮೊಗ್ಗದ ತಾವರೆಕೊಪ್ಪ ಹುಲಿ-ಸಿಂಹಧಾಮ, ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ಒಳಪಡುತ್ತದೆ.
ಓದಿ: ಸ್ಫೋಟ ಪ್ರಕರಣದಲ್ಲಿ ಯಾರೇ ಅಪರಾಧಿಗಳಾಗಿದ್ರೂ ಶಿಕ್ಷೆ ಅನುಭವಿಸಲೇಬೇಕು; ಸಿ.ಎಂ. ಬಿಎಸ್ವೈ
ಇದನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಲಾಗಿದೆ. ಈ ಅಭಯಾರಣ್ಯ ವ್ಯಾಪ್ತಿಯ ಸುತ್ತಲಿನ 15 ಕಿ.ಮೀ. ದೂರ ಯಾವುದೇ ಕಲ್ಲುಗಣಿಗಾರಿಕೆ ನಡೆಸಬಾರದು ಎಂದು ಕೇಂದ್ರದ ಅರಣ್ಯ ಇಲಾಖೆ ಆದೇಶ ಹೊರಡಿಸಿತು. ಇದರ ಅನ್ವಯ ಕಳೆದ 10 ವರ್ಷಗಳಿಂದ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿಲ್ಲ. ಕಲ್ಲು ಗಣಿಗಾರಿಕೆ ನಡೆಸಬೇಕಾದವರು ಸ್ಪೋಟಕಗಳನ್ನಿಟ್ಟು ಬ್ಲಾಸ್ಟ್ ಮಾಡುವಂತಿಲ್ಲ. ಮ್ಯಾನುವಲ್ ಆಗಿ ಕಲ್ಲುಪುಡಿ ಮಾಡಿ ತೆಗೆಯಬಹುದು. ಆದರೆ, ಮ್ಯಾನುವಲ್ ಆಗಿ ಕಲ್ಲನ್ನು ಪುಡಿ ಮಾಡಿ ಮಾರಾಟ ಮಾಡಲು ಆಗುವುದಿಲ್ಲ.
ಆದರೆ, ಕಲ್ಲನ್ನು ಪುಡಿ ಮಾಡಲು ಕ್ರಷರ್‌ಗೆ ಅವಕಾಶ ನೀಡಲಾಗಿದೆ. ಕ್ರಷರ್‌ಗೆ ಅನುಮತಿ ಸಿಕ್ಕರೆ ಪಕ್ಕದಲ್ಲಿಯೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಾರೆ. ಇದಕ್ಕಾಗಿ ಜಿಲಿಟಿನ್ ಕಡ್ಡಿ ಸೇರಿದಂತೆ ಬ್ಲಾಸ್ಟ್ ವಸ್ತುಗಳನ್ನು ಬಳಸುತ್ತಾರೆ. ಇದರಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಕಲ್ಲುಗಣಿಗಾರಿಕೆ ನಡೆದಿದೆ.
ಶಿವಮೊಗ್ಗದಲ್ಲಿ ಮೊನ್ನೆ ನಡೆದ ಘಟನೆ ದೇಶದ ಗಮನ ಸೆಳೆದಿದೆ. ಸ್ಪೋಟದಲ್ಲಿ ಮೃತರಾದವರಿಗೆ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಮುಖ್ಯಮಂತ್ರಿ, ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಟ್ವೀಟ್ ಮಾಡಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಇದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಇದನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ತಮ್ಮ ವಾಗ್ದಾಳಿ ನಡೆಸುತ್ತಿದ್ದಾರೆ. ಇಷ್ಟೊಂದು ಸ್ಪೋಟಕ ವಸ್ತುಗಳು ಹೇಗೆ ಬಂದವು, ಇದೆಲ್ಲಾ ಅಕ್ರಮವಾಗಿ ನಡೆಯುತ್ತಿರುವುದರಿಂದ ಇದರ ನೈತಿಕ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೂತ್ತು ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಇದು ಸಿಎಂ ತವರು ಜಿಲ್ಲೆಯಲ್ಲಿ ನಡೆದ ಘಟನೆಯಿಂದಾಗಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.
ಸ್ಪೋಟದ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ : ಮೊನ್ನೆ ನಡೆದ ಸ್ಪೋಟದ ಸಂದರ್ಭದಲ್ಲಿ ಉಂಟಾದ ಶಬ್ದ ಹಾಗೂ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಆರು ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಐದು ಜನರ ಮಾಹಿತಿ ಸಿಕ್ಕಿದೆ. ಉಳಿದ ಓರ್ವನ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪನವರೇ ಹೇಳಿದ್ದಾರೆ. ಅಲ್ಲದೆ ಕಲ್ಲುಗಣಿಗಾರಿಕೆ ಅತಿ ಅವಶ್ಯಕ ಎಂದು ಹೇಳಿಕೆ ನೀಡಿರುವುದು ಇನ್ನಷ್ಟು ಗಣಿಗಾರಿಕೆ ತಲೆ ಎತ್ತಲು ಕಾರಣವಾಗಬಹುದು. ಇಂದು ಸಿಎಂ ಯಡಿಯೂರಪ್ಪ ಹಾಲಿ ಇರುವ ಕ್ರಷರ್‌ಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿಸುವ ಸೂಚನೆಯನ್ನು ನೀಡಿದ್ದಾರೆ.