ಶಿವಮೊಗ್ಗ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೂ ಅಕ್ರಮವಾಗಿ ಗೋವುಗಳ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಒಪ್ಪಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಮೇಲೂ ಅಕ್ರಮ ಗೋ ಸಾಗಣೆ ಹಾಗೂ ಹತ್ಯೆ ನಡೆಯುತ್ತಿದೆ. ಇದಕ್ಕೆ ಪೊಲೀಸ್ ಬಿಗಿ ಭದ್ರತೆ ಇಲ್ಲದಿರುವುದೇ ಕಾರಣ ಎಂದರು.
ಮೊನ್ನೆ (ಮಂಗಳವಾರ) ತೀರ್ಥಹಳ್ಳಿ ತಾಲೂಕಿನಲ್ಲಿ ಗೋ ಸಾಗಣೆ ಮಾಡುವವರನ್ನು ತಡೆಯಲು ಹೋದಾಗ ಅವರ ಬೈಕ್ ಮೇಲೆಯೇ ವಾಹನ ಡಿಕ್ಕಿ ಹೊಡೆದು ಸಾಯಿಸಲು ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ಹೋಗಿ ಅವರನ್ನು ರಕ್ಷಿಸಿ, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಗಾಯಗೊಂಡವರಿಗೆ ತೀರ್ಥಹಳ್ಳಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದೆ. ನಾನು ಸಹ ಮಣಿಪಾಲ ಆಸ್ಪತ್ರೆಗೆ ಹೋಗಿ ಆರೋಗ್ಯ ವಿಚಾರಿಸಿ ಬಂದಿದ್ದೇನೆ. ಅವರಿಗೆ ಗಂಭೀರ ಗಾಯಗಳಾಗಿದ್ದು ಪ್ರಾಣಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದರು.
ಕಠಿಣ ಕ್ರಮಕ್ಕೆ ಸೂಚನೆ:
ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ತಿಂಗಳ ಹಿಂದೆಯೇ ಎಸ್ಪಿ ಜತೆ ಮಾತನಾಡಿದ್ದೆ. ಅವರು ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿ ಖಾನೆ ಹಾಗೂ ಸಾಗಾಣೆ ವಿರುದ್ಧ ಕ್ರಮ ತೆಗೆದುಕೊಂಡಿದ್ದರು. ಮೊನ್ನೆ(ಮಂಗಳವಾರ)ಯಿಂದ ಪೊಲೀಸ್ ಇಲಾಖೆ ದಂಧೆಯಲ್ಲಿ ಇರುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಂಡಿದೆ ಎಂದರು.
ಡಿಜಿಪಿರೊಂದಿಗೆ ಮಾತನಾಡಿದ್ದೇನೆ. ಅಕ್ರಮ ಕಾಸಾಯಿ ಖಾನೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಗೋಹತ್ಯೆ ನಿಷೇಧದಂತಹ ಪ್ರಮುಖ ಕಾಯ್ದೆಯನ್ನೇ ಪೊಲೀಸರ ಕೈಗೆ ನೀಡಲಾಗಿದೆ. ಪೊಲೀಸರು ಈ ವಿಚಾರದಲ್ಲಿ ಸುಮ್ಮನೆ ಕೂರಬಾರದು. ಹಾಗೇನಾದರೂ ಸುಮ್ಮನೆ ಕುಳಿತಿದ್ದು, ಕಂಡು ಬಂದರೆ ಸಂಬಂಧ ಪಟ್ಟ ಪೊಲೀಸ್ ಠಾಣೆಯ ಅಧಿಕಾರಿಯ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋ ಹತ್ಯೆಗೆ ಬೆಂಬಲ ನೀಡಿದ್ದೇ ಕಾಂಗ್ರೆಸ್:
ಗೋಹತ್ಯೆಗೆ ಬೆಂಬಲ ನೀಡಿದ್ದೇ ಕಾಂಗ್ರೆಸ್. ಆದರೆ, ಈಗ ಖಂಡಿಸುತ್ತಿದ್ದಾರೆ. ಇದನ್ನು ಎಲ್ಲರೂ ಖಂಡಿಸುವ ಅವಶ್ಯಕತೆ ಇದೆ. ಕಾಂಗ್ರೆಸ್ ನವರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಾರೆ. ಹಿಂದೆ ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಕಾಂಗ್ರೆಸ್ ವಾಪಸ್ ಪಡೆದಿತ್ತು. ಈಗ ಪ್ರತಿಭಟನೆ ಮಾಡುತ್ತಾರೆಯೇ ಎಂದು ಸಚಿವರು ಪ್ರಶ್ನಿಸಿದ್ದಾರೆ.
ವಿಶ್ವನಾಥ್ ಪ್ರಕರಣನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ:
ಶಾಸಕ ವಿಶ್ವನಾಥ್ ಕೊಲೆ ಯತ್ನದ ಜಾಲದ ಬಗ್ಗೆ ಮೊನ್ನೆಯೇ ಮಾಹಿತಿ ಬಂದಿತ್ತು. ಇದರಿಂದ ವಿಶ್ವನಾಥ್ ಅವರಿಗೆ ರಕ್ಷಣೆ ಹಾಗೂ ಅವರ ಮನೆಗೆ ಬಂದೋಬಸ್ತ್ ಮಾಡಲಾಗಿದೆ. ಕೊಲೆ ಯತ್ನದ ಪ್ರಕರಣ ದಾಖಲಾಗಿದೆ. ಇದರ ಅನ್ವಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಅವರು ಸಹಜವಾಗಿ ಗೋಪಾಲಕೃಷ್ಣ ಆರೋಪವನ್ನು ತಳ್ಳಿ ಹಾಕುತ್ತಾರೆ.
ಆದರೆ, ಈ ಕುರಿತು ಸಾಕ್ಷ್ಯಧಾರಗಳಿವೆ. ಈ ಕುರಿತು ನಾನು ಹೆಚ್ಚಿನದನ್ನು ಹೇಳಲ್ಲ, ಆದರೆ ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.
ಆಡಳಿತ ಪಕ್ಷದ ಶಾಸಕರ ಮೇಲಾಗಲಿ, ಸಾಮಾನ್ಯರ ಮೇಲಾಗಲಿ ಇದು ಆಗಬಾರದು. ಕಾರಣ ಹಫ್ತಾ ಕೊಟ್ಟು ಕೊಲೆ ಮಾಡಿಸುವುದು ಆಗಬಾರದು. ಈ ವಿಚಾರದಲ್ಲಿ ಪೊಲೀಸರಿಗೆ ತನಿಖೆ ನಡೆಸಲು ಸ್ವತಂತ್ರ ನೀಡಲಾಗಿದೆ. ಅವರು ಸಮಂಜಸವಾಗಿ ತನಿಖೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊರೊನಾ ತಡೆಗೆ ಜನರ ಸಹಕಾರ ಮುಖ್ಯ:
ಕೊರೊನಾ ತಡೆಗೆ ಜನರು ಸಹಕಾರ ನೀಡಬೇಕು. ಜನ ಈಗ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಈ ರೀತಿ ಆಗಬಾರದು. ಸರ್ಕಾರ ದಂಡ ಹಾಕಬಹುದು. ಆದರೆ, ಜನರು ಎಚ್ಚೆತ್ತು ಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ವ್ಯಕ್ತಿಯನ್ನು ಠಾಣೆಗೆ ಕರೆತಂದು ಹಲ್ಲೆ ವಿಚಾರ: ಕಲಬುರಗಿ ಚೌಕ್ ಠಾಣೆಯ 4 ಕಾನ್ಸ್ಟೇಬಲ್ಗಳು ಅಮಾನತು!