ಶಿವಮೊಗ್ಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವೋಟಿಗಾಗಿ ಓಲೈಕೆ ಮಾಡಿ ವಿ.ಡಿ. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರ ಬೂಟು ನೆಕ್ಕಿದ್ರು ಎಂಬ ಹೇಳಿಕೆ ಒಂದು ಸಮುದಾಯವನ್ನು ಎತ್ತಿಕಟ್ಟಿದೆ. ಚುನಾವಣಾ ವರ್ಷ ಆಗಿರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸಾವರ್ಕರ್ ಓರ್ವ ಸ್ವಾತಂತ್ರ್ಯ ಹೋರಾಟಗಾರ, 13 ವರ್ಷ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ವೀರ ಸಾವರ್ಕರ್ ಫೋಟೋ ಅಳವಡಿಕೆ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮುಸ್ಲಿಂ ಏರಿಯಾಗಳು ಏನ್ ದೇಶದ ಹೊರಗೆ ಇದ್ದಾವೆಯೇ ಎಂದು ಒಂದು ಕ್ಷಣ ಗರಂ ಆದರು. ಸಿದ್ದರಾಮಯ್ಯನವರು ಹೀಗೆ ಮಾಡಿಯೇ ಅವರ ಆಳ್ವಿಕೆಯಲ್ಲಿ ಒಂದು ಸಮುದಾಯವನ್ನು ಎತ್ತಿ ಕಟ್ಟಿದ್ದಾರೆ. ಸಾವರ್ಕರ್ ಫೋಟೋವನ್ನು ಈ ದೇಶದಲ್ಲಿ ಹಾಕಬಾರದಾ? ಅವರ ಫೋಟೋವನ್ನು ಹಾಕುವುದನ್ನು ನಿಷೇಧ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಜೊತೆ ಚರ್ಚೆ ನಡೆಸಲಾಗಿದೆ. ಹಲ್ಲೆ ಹಾಗೂ ಅವಹೇಳನದಂತಹ ಪ್ರಕರಣದಲ್ಲಿ ಯಾರೇ ಇದ್ರು ಸಹ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಶಿವಮೊಗ್ಗದ ಪ್ರೇಮ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದವರ ಹಿಂದೆ ಯಾವ ಸಂಘಟನೆ ಇದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯದವರೆಗೂ ತೆಗೆದುಕೊಂಡು ಹೋಗುತ್ತೇವೆ ಎಂದರು.
ಇದನ್ನೂ ಓದಿ: ಶಿವಮೊಗ್ಗ ಘಟನೆ ಆಕಸ್ಮಿಕವಲ್ಲ, ಸರ್ಕಾರದ ಕಠಿಣ ಕ್ರಮ ಹಾಸ್ಯಾಸ್ಪದ: ಮುತಾಲಿಕ್
ಪ್ರೇಮ್ ಸಿಂಗ್ಗೆ ಚಾಕು ಇರಿದ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ಆರೋಪಿಗಳನ್ನು ಬಂಧಿಸಬೇಕಾಗಿರುವ ಕುರಿತು ಪೊಲೀಸರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾವು ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಿದ್ದೇವೆ. ಪ್ರಕರಣದಲ್ಲಿ ಯಾವುದೇ ಸಂಘಟನೆ ಇದ್ರೂ, ಅವರನ್ನು ಸುಮ್ಮನೆ ಬಿಡುವುದಿಲ್ಲ. ಶಿವಮೊಗ್ಗ-ಭದ್ರಾವತಿ ಜನತೆ ಪೊಲೀಸರೊಂದಿಗೆ ಸಹಕರಿಸಿ ಎಂದು ಗೃಹ ಸಚಿವರು ಮನವಿ ಮಾಡಿಕೊಂಡರು.