ಚಿಕ್ಕಮಗಳೂರು/ಶಿವಮೊಗ್ಗ: ಜಿಲ್ಲೆಗಳಲ್ಲಿ ಇಂದು ಕೂಡ ಧಾರಾಕಾರ ಮಳೆ ಮುಂದುವರೆದಿದೆ. ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಗೆ ಮಲೆನಾಡು ಜನರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಮಗಳೂರು ತಾಲೂಕಿನ ಹೊನ್ನಾಳ ಚೆಕ್‌ಪೋಸ್ಟ್ ಬಳಿಯ ರಸ್ತೆ ಮಧ್ಯದಲ್ಲಿ ಬಿರುಕು ಬಿಟ್ಟಿದೆ. ಚಿಕ್ಕಮಗಳೂರಿನಿಂದ ಮುತ್ತೋಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಕಳೆದ 2 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ-ಭದ್ರಾ, ಹೇಮಾವತಿ ನದಿಗಳ ನೀರಿನ ಹರಿವು ಹೆಚ್ಚಾಗಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಜೊತೆಗೆ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮೂಡಿಗೆರೆ ತಾಲೂಕಿನ ಬೊಮ್ಮನಗದ್ದೆಯಲ್ಲಿ ಮನೆ ಮೇಲೆ ಮರ ಬಿದ್ದಿದೆ. ಧರ್ಮಸ್ಥಳ ವಿಪತ್ತು ತಂಡದಿಂದ ಮನೆ ದುರಸ್ತಿ ಕಾರ್ಯ ನಡೆಯುತ್ತಿದೆ
ಇನ್ನು ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂನಿಂದ ತುಂಗಾ ನದಿಗೆ 41,040 ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ. ತುಂಗೆಯ ಹರಿವನ್ನು ನಗರದ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.