ಶಿವಮೊಗ್ಗ: 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಘೋಷಿಸಿದ್ದು, ಸಾಗರದ ಇಂದಿರಾ ನಗರದ ನಿವಾಸಿ ಗೌರಮ್ಮ ಹುಚ್ಚಪ್ಪ ಮಾಸ್ಟರ್ ಅವರಿಗೆ ಪ್ರಶಸ್ತಿ ಲಭಿಸಿದೆ.
ಜಾನಪದ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಗೌರಮ್ಮ ಅವರು ಕೆಲಸ ಮಾಡಿದ್ದು, ಇದು ಹಿರಿತನಕ್ಕೆ ಸಂದ ಗೌರವವಾಗಿದೆ. ಗೌರಮ್ಮ ಅವರ ಪತಿ ಹುಚ್ಚಪ್ಪ ಮಾಸ್ಟರ್ ಸದ್ಯಕ್ಕೆ ನಿವೃತ್ತ ಶಿಕ್ಷಕರಾಗಿದ್ದು, ಇವರು ಕೂಡ ಜಾನಪದ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದಾರೆ. ತಾಳಗುಪ್ಪದ ಹರಿಜನ-ಗಿರಿಜನ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತೆ ಗೌರಮ್ಮ ಅವರು ಬಿಳಿ ಹಸೆ, ಕೆಂಪು ಹಸೆ, ಮದುವೆ ಮನೆ ಹಸೆ, ಭೂಮಿ ಹುಣ್ಣಿಮೆ ಬುಟ್ಟಿಯ ಕಲಾತ್ಮಕ ಶೃಂಗಾರ, ಭತ್ತದ ತೆನೆಯ ಬಾಗಿಲು ತೋರಣ, ಹಿಟ್ಟಂಡೆ ಹುಲ್ಲಿನಾಭರಣದ ಬುಟ್ಟಿಗಳು ಸೇರಿದಂತೆ ಇನ್ನೂ ಮುಂತಾದ ಜಾನಪದೀಯ ಚಿತ್ತಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.