ಶಿವಮೊಗ್ಗ: ಬಿಜೆಪಿ ರಾಜಕೀಯ ದ್ವೇಷದಿಂದ ಇಡಿಯನ್ನು ಬಳಸಿಕೊಂಡು ರಾಹುಲ್ ಗಾಂಧಿಯವರ ವಿಚಾರಣೆ ನಡೆಸುತ್ತಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನ್ಯಾಷನಲ್ ಹೆರಾಲ್ಡ್ ಕೇಸ್ಗೆ ಮರು ಜೀವ ನೀಡಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ನ ಟ್ರಸ್ಟಿಯಾಗಿದ್ದಾರೆ. ಭಾರತ್ ಜೋಡೋ ಅಭಿಯಾನಕ್ಕೆ ವ್ಯಕ್ತವಾಗುತ್ತಿರುವ ಬೆಂಬಲ ಕಂಡು ಬಿಜೆಪಿ ಹೀಗೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಮತ್ತು ಐಟಿ ಇಲಾಖೆ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ನಾವು ವಿಚಾರಣೆ ಬೇಡ ಅನ್ನುತ್ತಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಹೀಗೆ ದುರುಪಯೋಗ ಆಗಿತ್ತಾ ಎಂದು ಪ್ರಶ್ನೆ ಮಾಡಿದರು. ಸಂಸದ ಡಿ.ಕೆ.ಸುರೇಶ್ ಜೊತೆ ಪೊಲೀಸರು ನಡೆದುಕೊಂಡ ರೀತಿ ಅಮಾನವೀಯ. ಇದು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಯತ್ನ ಎಂದು ಕಿಡಿಕಾರಿದರು.
ಸಿ.ಟಿ. ರವಿಗೆ ತಲೆ ಸರಿ ಇಲ್ಲ: ಸಿ.ಟಿ.ರವಿಗೆ ತಲೆ ಸರಿ ಇಲ್ಲ. ಆತನಿಗೆ ಕಾನೂನು ಗೊತ್ತಿಲ್ಲ. ಆತನಿಗೆ ಏನೂ ತಿಳಿದಿಲ್ಲ, ಇದರಿಂದ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾನೆ. ನಾನು ಕಾನೂನು ಪದವೀಧರ. ಅದಕ್ಕೆ ನಾನು ಕಾನೂನು ಪ್ರಕಾರ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ: ವಾಯುವ್ಯ ಪದವೀಧರ ಕ್ಷೇತ್ರ: 2ನೇ ಬಾರಿಗೆ ಭರ್ಜರಿ ಗೆಲುವು ಕಂಡ ಹನುಮಂತ ನಿರಾಣಿ