ಶಿವಮೊಗ್ಗ: ಅರಣ್ಯ ಹಕ್ಕು ಕಾಯ್ದೆಯ ವಿರುದ್ಧವಾಗಿ ರೈತರ ಮೇಲೆ ಮೊಕದ್ದಮೆ ದಾಖಲಿಸಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪೊಲೀಸರು ರೈತರನ್ನು ತಡೆದರೂ ಜಿಲ್ಲಾಧಿಕಾರಿ ಬರುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲೇ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ರೈತರ ಮನವಿ ಸ್ವೀಕರಿಸಲು ಆಗಮಿಸಿದರು. ಈ ವೇಳೆ, ರೈತರ ಮೇಲೆ ಮೊಕದ್ದಮೆ ದಾಖಲಿಸಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅರಣ್ಯ ಕಾಯ್ದೆಯಡಿ ರೈತರ ಅರ್ಜಿ ಇತ್ಯರ್ಥವಾಗುವರೆಗೆ ರೈತರನ್ನು ಒಕ್ಕಲೆಬ್ಬಿಸಬಾರದು ಎಂಬ ಕಾನೂನು ಇದೆ. ಆದರೂ ಅದನ್ನು ಲೆಕ್ಕಿದೇ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರ ಮೇಲೆ ಪ್ರಕರಣ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ. ಹಾಗಾದರೇ ಅರಣ್ಯ ಕಾಯ್ದೆಗೆ ಕಿಮ್ಮತ್ತು ಇಲ್ಲವೇ?, ಇದು ಸಂವಿಧಾನ ವಿರೋಧಿ ಎಂದು ಅರಣ್ಯ ಕಾಯ್ದೆ ಪುಸ್ತಕವನ್ನು ಜಿಲ್ಲಾಧಿಕಾರಿಗಳ ಎದುರೇ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.