ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಚುನಾವಣೆ ನಡೆಸದಂತೆ ಮಧ್ಯಂತರ ಆದೇಶವನ್ನು ಹೈಕೋರ್ಟ್ ನೀಡಿದೆ. ಇದರಿಂದ ಇಂದು ನಡೆಯಬೇಕಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ರದ್ದು ಮಾಡಲಾಗಿದೆ. ಸದ್ಯ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅಧ್ಯಕ್ಷರಾಗಿ ಮಂದುವರೆಯಲಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಅಧ್ಯಕ್ಷರಾಗಿದ್ದ ಮಂಜುನಾಥ್ ಗೌಡರನ್ನು ಸಹಕಾರಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹ ಮಾಡಿ ರಾಜ್ಯ ಸಹಕಾರಿ ಇಲಾಖೆ ಆದೇಶ ನೀಡಿತ್ತು. ಇದರಿಂದ ಉಪಾಧ್ಯಕ್ಷ ಅಧ್ಯಕ್ಷರಾಗಿದ್ದರು. ಈಗ ಅನರ್ಹರಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕಿತ್ತು. ಇದಕ್ಕಾಗಿ ನಾಗೇಂದ್ರ ಹೊನ್ನಾಳಿಯವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಅಲ್ಲದೆ ಇಂದು ಬೆಳಗ್ಗೆ 10:30ಕ್ಕೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದರು.
ನಿನ್ನೆ ಹೈಕೋರ್ಟ್ನಲ್ಲಿ ನಡೆದ ವಾದ-ವಿವಾದ ಅಲಿಸಿದ ನ್ಯಾಯಾಧೀಶರು ಇಂದು ತಾವು ಹೇಳುವವರೆಗೂ ಚುನಾವಣಾ ಪ್ರಕ್ರಿಯೆ ನಡೆಸದಂತೆ ಸೂಚಿಸಿದ್ದರು. ಅದರಂತೆ ಇಂದು ಬೆಳಗ್ಗೆ ಮಧ್ಯಂತರ ತಡೆ ನೀಡಲಾಗಿದೆ. ಇದರಿಂದ ಇಂದು ನಡೆಯಬೇಕಿದ್ದ ಚುನಾವಣೆ ಮುಂದೂಡಲ್ಪಟ್ಟಿದೆ. ಮಂಜುನಾಥ್ ಗೌಡ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಚುನಾವಣಾಧಿಕಾರಿ ನಾಗೇಂದ್ರ ಹೊನ್ನಾಳಿ ತಿಳಿಸಿದ್ದಾರೆ.
ಮಂಜುನಾಥ್ ಗೌಡ ಮಾತನಾಡಿ, ಸದ್ಯ ನಮಗೆ ಹೈಕೋರ್ಟ್ ಚುನಾವಣೆಗೆ ಮಧ್ಯಂತರ ತಡೆ ನೀಡಿದೆ. ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ನಷ್ಟದಲ್ಲಿದ್ದ ಬ್ಯಾಂಕ್ನಲ್ಲಿ ಲಾಭ ಬರುವಂತೆ ಮಾಡಲಾಗಿದೆ. ಇಷ್ಟಾದರು ಸಹ ನಮ್ಮ ಮೇಲೆ ಆರೋಪ ಮಾಡುವುದು ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾವಣೆ ರದ್ದಾದ ಕುರಿತು ತಿಳಿಯುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಚನ್ನವೀರಪ್ಪ ಹಾಗೂ ಶ್ರೀಪಾದ್ ಹೆಗಡೆ ಸೇರಿ ಇನ್ನೋರ್ವ ನಿರ್ದೇಶಕರು ಬ್ಯಾಂಕ್ನಿಂದ ಕಾಲ್ಕಿತ್ತರು. ಈ ವೇಳೆ ಮಾತನಾಡಿದ ಅವರು, ಇದು ಮಧ್ಯಂತರ ತೀರ್ಪು. ಇದು ಅಂತಿಮ ತೀರ್ಪಲ್ಲ. ಮುಂದೆ ಏನು ಆಗುತ್ತದೆಯೋ ಕಾದು ನೋಡಬೇಕು ಎಂದರು.